ತುಮಕೂರು: ಮುತ್ಯಾನ ಮಾತು ನಂಬಿ 2 ವರ್ಷದ ಹಿಂದೆ ಕಾಣೆಯಾಗಿದ್ದ ಮಗಳನ್ನು ಹುಡುಕಿಕೊಂಡು ಕುಟುಂಬವೊಂದು ಸಿದ್ಧಗಂಗಾ ಮಠಕ್ಕೆ ಬಂದಿರುವ ಪ್ರಸಂಗ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ಗುರುಗಂಟಾ ಗ್ರಾಮದ ಗಂಗಮ್ಮ(26) 2 ವರ್ಷದ ಹಿಂದೆ ಕಾಣೆಯಾಗಿದ್ದರು. ಗಂಡ ಮತ್ತೊಂದು ಮದುವೆಯಾಗಿದ್ದರಿಂದ ಮನನೊಂದು ಗಂಗಮ್ಮ ಮನೆ ಬಿಟ್ಟು ಹೋಗಿದ್ದಳು. ಮಗಳನ್ನು ಹುಡುಕಿಕೊಡುವಂತೆ ತಾಯಿ ದೂರು ನೀಡಿದ್ದರು. ಈ ನಡುವೆ ರಾಯಚೂರಿನ ಮುತ್ಯಾ ಗೌಡೂರು ಸಾಬ್, ನಿಮ್ಮ ಮಗಳು ಸಿದ್ಧಗಂಗಾ ಮಠದಲ್ಲಿದ್ದಾಳೆ ಎಂದು ಹೇಳಿದ ಹಿನ್ನೆಲೆಯಲ್ಲಿ ಮಗಳನ್ನು ಹುಡುಕುತ್ತಾ ಮಠಕ್ಕೆ ತಾಯಿ ಆಗಮಿಸಿದ್ದಾರೆ.
ನಾಪತ್ತೆಯಾಗಿರುವ ಗಂಗಮ್ಮಗೆ ಲಿಂಗಸೂಗೂರು ತಾಲೂಕಿನ ಎರಜಂತಿ ಗ್ರಾಮದ ತಿಮ್ಮನಗೌಡ ಜತೆ ಮದುವೆಯಾಗಿತ್ತು. ಇವರಿಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ. ದಂಪತಿ 4 ವರ್ಷದ ಹಿಂದೆ ಕೂಲಿಗಾಗಿ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಪತಿ ತಿಮ್ಮನಗೌಡ ಶಾಲೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಗಂಗಮ್ಮ ಹೆಬ್ಬಾಳದ ಗುಲಾಬಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ತಿಮ್ಮನಗೌಡ ಪತ್ನಿ ಗಂಗಮ್ಮಳನ್ನು ಬಿಟ್ಟು ಬೇರೆ ಮದುವೆಯಾಗಿದ್ದ. ಇದರಿಂದ ಮನನೊಂದು ಗಂಗಮ್ಮ ಮನೆ ಬಿಟ್ಟು ಹೋಗಿದ್ದರು.
ನಾಪತ್ತೆಯಾಗಿದ್ದ ಮಗಳನ್ನು ಹುಡುಕಿಕೊಡುವಂತೆ ಹೆಬ್ಬಾಳ ಹಾಗೂ ಲಿಂಗಸೂಗೂರು ಪೊಲೀಸ್ ಠಾಣೆಗೆ ತಾಯಿ ಅಂಬಮ್ಮ ದೂರು ನೀಡಿದ್ದರು. 2 ವರ್ಷ ವಾದರೂ ಮಗಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಜ್ಯೋತಿಷ್ಯ ಕೇಳಿದಾಗ ನಿಮ್ಮ ಮಗಳು ಸಿದ್ಧಗಂಗಾ ಮಠದಲ್ಲಿದ್ದಾಳೆ ಎಂದು ರಾಯಚೂರಿನ ಮುತ್ಯಾ ಗೌಡೂರು ಸಾಬ್ ಹೇಳಿದ್ದರು. ಜ್ಯೋತಿಷಿ ಮಾತು ನಂಬಿ ಮಗಳು ಸಿಗುತ್ತಾಳೆಂಬ ಭರವಸೆಯಿಂದ ಕುಟುಂಬ ಸಮೇತ ಸಿದ್ಧಗಂಗಾ ಮಠಕ್ಕೆ ಬಂದಿರುವ ತಾಯಿ ಅಂಬಮ್ಮ, ಮಠದ ಸಿಬ್ಬಂದಿ, ಭಕ್ತರ ಬಳಿ ಮಗಳ ಫೋಟೊ ತೋರಿಸಿ ವಿಚಾರಿಸುತ್ತಿದ್ದಾರೆ.
ಕಾಣೆಯಾಗಿರುವ ಗಂಗಮ್ಮನ ಮೂವರು ಮಕ್ಕಳೊಂದಿಗೆ ಊರೂರು ಸುತ್ತಿ ಹುಡುಕಾಟ ನಡೆಸುತ್ತಿರುವ ಕುಟುಂಬ ನೋವು ಹೇಳತೀರದಾಗಿದೆ. ತಾಯಿ ಅಂಬಮ್ಮ ಸಿದ್ಧಗಂಗಾ ಮಠದಲ್ಲಿ ಮಗಳ ಫೋಟೊ ಹಿಡಿದು ಹುಡುಕಾಟ ನಡೆಸುತ್ತಿರುವ ದೃಶ್ಯ ಮನಕಲುಕುವಂತಿತ್ತು.
ಈ ಸುದ್ದಿಯನ್ನೂ ಓದಿ | Drowned: ತುಂಗಭದ್ರಾ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕರಿಬ್ಬರ ಸಾವು