-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್ನಲ್ಲಿ ರಾಯಲ್ ಬ್ಲ್ಯೂ ವರ್ಣದ ಡಿಸೈನರ್ವೇರ್ಗಳು (Royal Blue Colour Fashionwears) ಟ್ರೆಂಡಿಯಾಗಿವೆ. ಹೌದು, ತಿಳಿ ನೀಲಿ, ಆಕಾಶ ನೀಲಿ, ಶೈನಿ ನೀಲಿ, ಬ್ಲೀಚ್ ಬ್ಲ್ಯೂ ಸೇರಿದಂತೆ ರಾಯಲ್ ನೀಲಿ ವರ್ಣದಲ್ಲೆ ನಾನಾ ಶೇಡ್ಸ್ ಮತ್ತು ಪ್ರಿಂಟ್ಸ್ನವು ಈ ಸೀಸನ್ನ ಟ್ರೆಂಡ್ನಲ್ಲಿವೆ. ಪಾರ್ಟಿವೇರ್ ಸಲ್ವಾರ್ ಸೂಟ್ಸ್ನಿಂದಿಡಿದು, ಸೀರೆ, ಸ್ಕಾರ್ಫ್ವರೆಗೂ ಈ ಕಲರ್ ಪಸರಿಸಿವೆ. ಅಂದಹಾಗೆ, ಕಳೆದ ಸೀಸನ್ನಲ್ಲಿ ಗಾಢ ವರ್ಣದಲ್ಲಿ ಆರಂಭವಾಗುವ ಈ ಟ್ರೆಂಡ್, ಬೇಸಿಗೆ ತಲುಪುತ್ತಿದ್ದಂತೆ ನಾನಾ ಬಗೆಯ ರಾಯಲ್ ಬ್ಲ್ಯೂ ಬಣ್ಣಕ್ಕೆ ತಿರುಗುತ್ತದೆ. ಹೆಚ್ಚು ಕಮ್ಮಿ ಪ್ರತಿ ವರ್ಷ ಇದೇ ರೀತಿಯ ಟ್ರೆಂಡ್ ಮುಂದುವರಿಯುತ್ತದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್ಪರ್ಟ್ಸ್.

ಫ್ಯಾಷನಿಸ್ಟಾಗಳ ಅಭಿಪ್ರಾಯ
ನಿಮ್ಮಲ್ಲಿ ಒಂದೂ ನೀಲಿ ಶೇಡ್ಸ್ನ ಡ್ರೆಸ್ ಇಲ್ಲವೇ? ಹಾಗಾದಲ್ಲಿ, ಡ್ರೆಸ್ಸಿಂಗ್ ಸೆನ್ಸ್ನಲ್ಲಿ ನಿಮ್ಮ ಅಭಿರುಚಿ ಕೊಂಚ ಸಪ್ಪೆಯಾಗುತ್ತಿದೆ ಎಂದರ್ಥ! ಮುಂದಿನ ಶಾಪಿಂಗ್ ಲಿಸ್ಟ್ನಲ್ಲಿ ನೀವು ನೀಲಿ ಶೇಡ್ ಉಡುಪುಗಳಿಗೆ ಜಾಗ ನೀಡಿ, ಹೊಸ ಬ್ಲ್ಯೂ ಡ್ರೆಸ್ ಒಂದನ್ನು ಕಬೋರ್ಡ್ಗೆ ಸೇರಿಸಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕಲರ್ ನಿಮ್ಮನ್ನು ಹೈಲೈಟ್ ಮಾಡುವುದು ಗ್ಯಾರಂಟಿ ಎನ್ನುತ್ತಾರೆ.
ರಾಯಲ್ ಕಲರ್
ಫ್ಯಾಷನ್ಲೋಕದಲ್ಲಿ ನೀಲಿಯ ಅತ್ಯುತ್ತಮ ಶೇಡ್ಸ್ ಆದ ರಾಯಲ್ ಬ್ಲ್ಯೂ ಎವರ್ಗ್ರೀನ್ ಬಣ್ಣವೆಂದೇ ಹೇಳಬಹುದು. ಸೀಸನ್ ಬದಲಾದರೂ ಪದೇ ಪದೇ ಮರುಕಳಿಸುತ್ತಲೇ ಇರುತ್ತದೆ. ನೀಲಿಯ ನೂರಾರು ಶೇಡ್ಸ್ ನಾನಾ ಡಿಸೈನರ್ವೇರ್ಗಳ ಮುಖಾಂತರ ಆಗಮಿಸುತ್ತಿರುತ್ತವೆ. ಅದರಲ್ಲೂ ಪಾರ್ಟಿವೇರ್ ಬಣ್ಣಗಳಾದ ರಾಯಲ್ ಬ್ಲ್ಯೂನ ಶೈನಿ ಶೇಡ್ಸ್ ರಾತ್ರಿ ಸಮಯದ ಸಮಾರಂಭಗಳಲ್ಲಿ ರಂಗೇರಿಸುತ್ತವೆ. ಅಷ್ಟು ಮಾತ್ರವಲ್ಲ, ಗ್ಲಾಮರ್ ಹೆಚ್ಚಿಸುತ್ತವೆ. ಅದರಲ್ಲೂ ನೈಟ್ ಟೈಮ್ ಪಾರ್ಟಿಗಳಿಗೆ ಹೇಳಿಟ್ಟ ಕಲ್ಲರ್ ಕೋಡ್ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

ಮರಳಿದ ಹಳೆ ಟ್ರೆಂಡ್
ಕಳೆದ 80ರ ದಶಕದಲ್ಲಿ ತಿಳಿ ನೀಲಿ ವರ್ಣದ ಡ್ರೆಸ್ಗಳು ಯಾವ ಮಟ್ಟಿಗೆ ಟ್ರೆಂಡ್ನಲ್ಲಿದ್ದವೆಂದರೆ, ಅಂದಿನ ಯಾವುದೇ ಸಿನಿಮಾ ನೋಡಿ, ಜಾಹೀರಾತು ನೋಡಿ, ನೀಲಿಮಯವಾಗಿತ್ತು. ಇದೀಗ ಈ ಬಣ್ಣ ಮತ್ತೊಮ್ಮೆ ಈ ಸೀಸನ್ಗೆ ಲಗ್ಗೆ ಇಟ್ಟಿದ್ದು, ಪರಿಣಾಮ, ಪೇಜ್3 ಸೆಲೆಬ್ರೆಟಿಗಳು, ಸಿನಿಮಾ ಸ್ಟಾರ್ಸ್, ಮಾಡೆಲ್ಸ್ ಈ ನೀಲಿಮಾಯೆಗೆ ಒಳಗಾಗಿದ್ದಾರೆ. ಪರಿಣಾಮ, ಅವರೆಲ್ಲರ ಡಿಸೈನರ್ಸ್ಗಳ ಕೈಗಳಲ್ಲಿ ನೀಲಿ ವರ್ಣದ ಡಿಸೈನರ್ವೇರ್ಸ್, ಜೀನ್ಸ್, ಗೌನ್, ಸೀರೆ, ಗಾಗ್ರಾ, ಮಿನಿಸ್, ಬ್ಲ್ಯೂ ಡೆನಿವ್ ಸ್ಕರ್ಟ್ಸ್ಗಳು ರೂಪುಗೊಳ್ಳುತ್ತಿವೆ. ಡಿಸೈನರ್ ರಾಘವ್ ಪ್ರಕಾರ, ಭಾರತೀಯರ ಚರ್ಮದ ಅಂದಕ್ಕೆ ಈ ನೀಲಿ ಬಣ್ಣ ಹೊಂದುತ್ತದಂತೆ. ಇವುಗಳಲ್ಲಿ ಎಲ್ಲರೂ ಆಕರ್ಷಕವಾಗಿ ಕಾಣುತ್ತಾರಂತೆ ಕೂಡ. ಸಂಭ್ರಮದ ಆಚರಣೆಯ ಯಾವುದೇ ಸಮಾರಂಭಗಳಿಗೂ ಇದು ಹೈ ಫ್ಯಾಷನ್ ಲುಕ್ ನೀಡುವುದು ಗ್ಯಾರಂಟಿ ಎನ್ನುತ್ತಾರೆ.

ವಾತಾವರಣಕ್ಕೆ ತಕ್ಕಂತೆ ಚಾಯ್ಸ್
ಕೆಲವರು ಎಲ್ಲಾ ಸೀಸನ್ಗಳಿಗೂ ನೀಲಿ ವರ್ಣದ ಡ್ರೆಸ್ ಧರಿಸುತ್ತಾರೆ. ಅದು ಅವರಿಗೆ ಹೊಂದುತ್ತದೆ ಕೂಡ. ಅವರಿಗೆ ಹೊಂದುವಂತಹ ಉಡುಪುಗಳನ್ನು ಧರಿಸುವುದು ಅವರಲ್ಲಿರುವ ಒಂದು ಡ್ರೆಸ್ಸಿಂಗ್ ಸೆನ್ಸ್ ಎಂದರೂ ತಪ್ಪಿಲ್ಲ! ಒಟ್ಟಿನಲ್ಲಿ ತಂಪಾದ ವಾತಾವರಣಕ್ಕೆ ನೀಲಿ ವರ್ಣದ ಶೆಡ್ಸ್ ಡ್ರೆಸ್ಗಳು ಪರ್ಫೆಕ್ಟ್ ಚಾಯ್ಸ್ ಎಂದರೂ ತಪ್ಪಿಲ್ಲ!
ಈ ಸುದ್ದಿಯನ್ನೂ ಓದಿ | Sling Bag Fashion: ಯುವತಿಯರ ಟ್ರಾವೆಲ್ ಫ್ಯಾಷನ್ಗೆ ಸಾಥ್ ನೀಡುವ ಶೋಲ್ಡರ್ ಸ್ಲಿಂಗ್ ಬ್ಯಾಗ್
ಚಾಯ್ಸ್ ಹೀಗಿರಲಿ
- ರಾಯಲ್ ಬ್ಲ್ಯೂ ಬಣ್ಣ ಹೈ ಫ್ಯಾಷನ್ ಲುಕ್ ನೀಡುತ್ತದೆ.
- ಡೇನಿಮ್ ತಿಳಿ ನೀಲಿ ಜೀನ್ಸ್ ಪ್ಯಾಂಟ್ ಈ ಸೀಸನ್ ಕ್ಯಾಶುವಲ್ ಲುಕ್ನಲ್ಲಿ ಟ್ರೆಂಡ್ನಲ್ಲಿದೆ.
- ಸೀರೆಯಲ್ಲಾದರೆ ಉತ್ತಮ ಶೇಡ್ಸ್ ವುಳ್ಳ ನೀಲಿ ಬಣ್ಣವನ್ನೇ ಆಯ್ಕೆ ಮಾಡುವುದು ಒಳ್ಳೆಯದು.
- ಉರಿ ಬಿಸಿಲಿಗೆ ಗಾಢ ವರ್ಣ ಬಳಕೆ ಬೇಡ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)