ಬೆಂಗಳೂರು: ಸತತ ಮೂರು ಸೋಲುಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಮೊದಲು ಗೆಲುವು ಸಾಧಿಸಿತು. ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಸಿದ್ದ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ದದ ಪಂದ್ಯದಲ್ಲಿ ಆರ್ಸಿಬಿ, 11 ರನ್ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಹದಿನೆಂಟನೇ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದ ಬೆಂಗಳೂರು ತಂಡ ಆರನೇ ಗೆಲುವು ಪಡೆಯುವ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಟೂರ್ನಿಯಲ್ಲಿ ಏಳನೇ ಸೋಲು ಅನುಭವಿಸಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪ್ಲೇಆಫ್ಸ್ ಹಾದಿ ಇನ್ನಷ್ಟು ಕಠಿಣವಾಗಿದೆ.
ಆರ್ಸಿಬಿ ನೀಡಿದ್ದ 206 ರನ್ಗಳ ಗುರಿಯನ್ನು ಹಿಂಬಾಲಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡ, ಯಶಸ್ವಿ ಜೈಸ್ವಾಲ್ (49) ಹಾಗೂ ಧ್ರುವ್ ಜುರೆಲ್ (47) ಅವರ ನಿರ್ಣಾಯಕ ಬ್ಯಾಟಿಂಗ್ ಹೊರತಾಗಿಯೂ, ಜಾಶ್ ಹೇಝಲ್ವುಡ್ ( 33 ಕ್ಕೆ 4) ಪರಿಣಾಮಕಾರಿ ಬೌಲಿಂಗ್ ದಾಳಿಗೆ ನಲುಗಿ 20 ಓವರ್ಗಳಿಗೆ 9 ವಿಕೆಟ್ಗಳ ನಷ್ಟಕ್ಕೆ 194 ರನ್ಗಳಿಗೆ ಸೀಮಿತವಾಯಿತು. ಆ ಮೂಲಕ ಕೂದಲೆಳೆಯ ಅಂತರದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲು ಒಪ್ಪಿಕೊಂಡಿತು.