ನವದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್ (KKR) ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು 14 ರನ್ಗಳಿಂದ ಸೋಲಿಸಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪ್ಲೇಆಫ್ ರೇಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮಂಗಳವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸುನೀಲ್ ನರೇನ್ ಆಲ್ರೌಂಡ್ ಆಟದ ಬಲದಿಂದ ಕೆಕೆಆರ್ ಗೆಲುವು ಸಾಧಿಸಿತ್ತು. ಸೋಲಿನ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್, ತಮ್ಮ ತಂಡ ಮಾಡಿದ ತಪ್ಪುಗಳು ಸೇರಿದಂತೆ ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಕೆಕೆಆರ್ ತನ್ನ ಪಾಲಿನ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 204 ರನ್ಗಳ ಮೊತ್ತವನ್ನು ಕಲೆ ಹಾಕಿತು. ತಂಡದ ಬ್ಯಾಟ್ಸ್ಮನ್ಗಳು ವೇಗದ ರನ್ರೇಟ್ನಲ್ಲಿ ಉಪಯುಕ್ತ ಕೊಡುಗೆಗಳನ್ನು ನೀಡಿದರು. ಅಂಗ್ಕ್ರಿಶ್ ರಘುವಂಶಿ 44 ರನ್ ಮತ್ತು ರಿಂಕು ಸಿಂಗ್ 36 ರನ್ ಕಲೆ ಹಾಕಿದರು. ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು. ಬಳಿಕ ಗುರಿ ಹಿಂಬಾಲಿಸಿದ ಡೆಲ್ಲಿ ಕೊನೆಯ ಓವರ್ವರೆಗೂ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ ಕೇವಲ 190 ರನ್ಗಳನ್ನು ಗಳಿಸಲು ಶಕ್ತವಾಯಿತು. ಇದು ಈ ಮೈದಾನದಲ್ಲಿ ಡೆಲ್ಲಿಯ ಮೂರನೇ ಸೋಲಾಯಿತು. ಪ್ಲೇಆಫ್ ರೇಸ್ನಲ್ಲಿ ಉಳಿಯಲು ಕೆಕೆಆರ್ಗೆ ಈ ಗೆಲುವು ಬಹಳ ಮುಖ್ಯವಾಗಿತ್ತು. ಪಂದ್ಯದ ನಂತರ ದೆಹಲಿ ನಾಯಕ ಅಕ್ಷರ್ ಪಟೇಲ್ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.
IPL 2025: ಕೆಕೆಆರ್ ವಿರುದ್ದ ಸೋತ ಡೆಲ್ಲಿ ಕ್ಯಾಪಿಟಲ್ಸ್ನ ಪ್ಲೇಆಫ್ಸ್ ಲೆಕ್ಕಾಚಾರ!
ಡೆಲ್ಲಿ ಸೋಲಿನ ಬಗ್ಗೆ ಅಕ್ಷರ್ ಪಟೇಲ್ ಹೇಳಿದ್ದೇನು?
ಪಂದ್ಯದ ಸೋಲಿನ ಬಳಿಕ ಮಾತನಾಡಿದ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್, “ಪವರ್ಪ್ಲೇನಲ್ಲಿ ನಾವು 15-20 ರನ್ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಕೆಲವು ವಿಕೆಟ್ಗಳನ್ನು ತುಂಬಾ ಸುಲಭವಾಗಿ ಕಳೆದುಕೊಂಡೆವು. ಒಳ್ಳೆಯ ವಿಷಯವೇನೆಂದರೆ ಪವರ್ ಪ್ಲೇ ನಂತರ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದ್ದೇವೆ. ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ಕೆಲವು ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡದಿದ್ದರೂ, ನಾವು 2-3 ಮಂದಿ ಕೊಡುಗೆ ನೀಡಿ ಪಂದ್ಯವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದೆವು. ವಿಪ್ರಜ್ ನಿಗಮ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅಶುತೋಷ್ ಇದ್ದಿದ್ದರೆ, ಮೊದಲ ಪಂದ್ಯದಂತೆಯೇ ಈ ಪಂದ್ಯವನ್ನು ಗೆಲ್ಲುತ್ತಿದ್ದೆವು ಎಂಬ ಭರವಸೆ ಇತ್ತು. ಪ್ರಾಕ್ಟೀಸ್ ಪಿಚ್ನಲ್ಲಿ ಚೆಂಡನ್ನು ನಿಲ್ಲಿಸಲು ಡೈವ್ ಮಾಡುವಾಗ ನನ್ನ ಚರ್ಮಕ್ಕೆ ಗಾಯವಾಯಿತು, ಆದರೆ ಒಳ್ಳೆಯ ವಿಷಯವೆಂದರೆ ನಮಗೆ ಮುಂದಿನ ಪಂದ್ಯಕ್ಕೆ 3-4 ದಿನಗಳ ವಿರಾಮವಿದೆ ಮತ್ತು ನಾನು ಸಂಪೂರ್ಣವಾಗಿ ಫಿಟ್ ಆಗುತ್ತೇನೆಂಬ ಭರವಸೆ ಇದೆ,” ಎಂದು ತಿಳಿಸಿದ್ದಾರೆ.
DC vs KKR: ಸುನೀಲ್ ನರೇನ್ ಆಲ್ರೌಂಡ್ ಆಟದಿಂದ ಗೆದ್ದ ಕೋಲ್ಕತಾ ನೈಟ್ ರೈಡರ್ಸ್!
ಪ್ಲೇಆಫ್ಸ್ಗೆ ತಲುಪಲು ಡೆಲ್ಲಿ ಏನು ಮಾಡಬೇಕು?
ಪ್ರಸಕ್ತ ಋತುವಿನ ಗುಂಪು ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಇನ್ನು 4 ಪಂದ್ಯಗಳು ಉಳಿದಿವೆ. ಇಲ್ಲಿಂದ 16 ಅಂಕಗಳನ್ನು ಗಳಿಸಲು ಅವರು 4 ಪಂದ್ಯಗಳಲ್ಲಿ ಕನಿಷ್ಠ 2ರಲ್ಲಿ ಗೆಲ್ಲಬೇಕು. ಒಂದು ವೇಳೆ ಡೆಲ್ಲಿ ಕನಿಷ್ಠ ಎರಡರಲ್ಲಿ ಗೆಲುವು ಪಡೆಯುವಲ್ಲಿ ವಿಫಲವಾದರೆ ಅಥವಾ ಕೇವಲ ಒಂದು ಪಂದ್ಯವನ್ನು ಗೆದ್ದರೆ, ಆಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ಸ್ ಭವಿಷ್ಯ ಇತರೆ ತಂಡಗಳನ್ನು ಅವಲಂಬಿಸಬೇಕಾಗುತ್ತದೆ. ಡೆಲ್ಲಿ 14 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ, 14 ಅಂಕಗಳನ್ನು ಹೊಂದಿರುವ ಎಲ್ಲಾ ತಂಡಗಳ ಪೈಕಿ ಉತ್ತಮ ರನ್ ರೇಟ್ ಕಾಯ್ದುಕೊಳ್ಳಬೇಕಾಗುತ್ತದೆ.