ಬೆಂಗಳೂರು: ಸ್ಯಾಂಡಲ್ವುಡ್ನ ಪ್ರತಿಷ್ಠಿತ ಪ್ರೊಡಕ್ಷನ್ ಕಂಪನಿ ಹೊಂಬಾಳೆ ಫಿಲ್ಮ್ಸ್ (Hombale Films) ʼಕಾಂತಾರ ಚಾಪ್ಟರ್ 1ʼ (Kantara Chapter 1) ಚಿತ್ರದ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. 2022ರಲ್ಲಿ ತೆರೆಕಂಡ ʼಕಾಂತಾರʼ (Kantara) ಸಿನಿಮಾ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಹೊಂಬಾಳೆ ಫಿಲ್ಮ್ಸ್ ಇದೀಗ ಅದರ ಪ್ರೀಕ್ವೆಲ್ ʼಕಾಂತಾರ ಚಾಪ್ಟರ್ 1ʼ ನಿರ್ಮಿಸುತ್ತಿದೆ. ಈ ಚಿತ್ರವನ್ನೂ ಮೊದಲ ಭಾಗದಂತೆ ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ನಟಿಸುತ್ತಿದ್ದಾರೆ. ಕುಂದಾಪುರದಲ್ಲಿ ನಡೆಯುತ್ತಿರುವ ಸಿನಿಮಾದ ಚಿತ್ರೀಕರಣದ ವೇಳೆ ದುರಂತವೊಂದು ಸಂಭವಿಸಿದ್ದು, ಜೂನಿಯರ್ ಆರ್ಟಿಸ್ಟ್ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದೀಗ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ ನೀಡಿದೆ.
ಇತ್ತೀಚೆಗೆ ʼಕಾಂತಾರ ಚಾಪ್ಟರ್ 1ʼ ಚಿತ್ರದಲ್ಲಿ ಭಾಗವಹಿಸಿದ್ದ ಕೇರಳ ಮೂಲಕ ಕಲಾವಿದ ಕಪಿಲ್ ಎನ್ನುವವರು ಉಡುಪಿ ಜಿಲ್ಲೆಯ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದರು. ಈ ಬಗ್ಗೆ ದೂರು ದಾಖಲಾಗಿದೆ. ಇದೀಗ ಘಟನೆ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿ, ದುರಂತ ʼಕಾಂತಾರ ಚಾಪ್ಟರ್ 1′ ಚಿತ್ರೀಕರಣ ಸ್ಥಳದಲ್ಲಿ ಸಂಭವಿಸಿಲ್ಲ ಎಂದು ಹೇಳಿದೆ.
ಹೊಂಬಾಳೆ ಫಿಲ್ಮ್ಸ್ನ ಪೋಸ್ಟ್:
We extend our heartfelt condolences to the family of M.F. Kapil, may they find strength and peace in this difficult time.
ಎಂ.ಎಫ್. ಕಪಿಲ್ ಅವರ ಅಗಲಿಕೆಯಿಂದ ನಮಗೆ ತೀವ್ರ ದುಃಖವಾಗಿದೆ. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು…🙏🏼 pic.twitter.com/mG6JPLVC6m
— Hombale Films (@hombalefilms) May 8, 2025
ಈ ಸುದ್ದಿಯನ್ನೂ ಓದಿ: Kantara Chapter 1: ʼಕಾಂತಾರ ಚಾಪ್ಟರ್ 1ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ; ನದಿಯಲ್ಲಿ ಮುಳುಗಿ ಜೂನಿಯರ್ ಆರ್ಟಿಸ್ಟ್ ಸಾವು
ಹೊಂಬಾಳೆ ಫಿಲ್ಮ್ಸ್ನ ಪೋಸ್ಟ್ನಲ್ಲಿ ಏನಿದೆ?
“ಎಂ.ಎಫ್.ಕಪಿಲ್ ಅವರ ನಿಧನಕ್ಕೆ ನಮ್ಮ ಅಗಾದವಾದ ಸಂತಾಪಗಳು. ಅವರ ಕುಟುಂಬಕ್ಕೆ ಹಾಗೂ ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪಾರ್ಥಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮೆಲ್ಲರ ಸಹಾನುಭೂತಿ ಅವರೊಂದಿಗಿದೆʼʼ ಎಂದು ತಿಳಿಸಿದೆ.
ಮುಂದುವರಿದು, “ಈ ಘಟನೆ ‘ಕಾಂತಾರ ಚಾಪ್ಟರ್ 1’ ಚಿತ್ರೀಕರಣದ ಸ್ಥಳದಲ್ಲಿ ಸಂಭವಿಸಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಆ ದಿನ ಯಾವುದೇ ಚಿತ್ರೀಕರಣ ನಿಗದಿಯಾಗಿರಲಿಲ್ಲ ಮತ್ತು ಆ ಘಟನೆ ಅವರ ವೈಯಕ್ತಿಕ ಕಾರ್ಯಕ್ರಮದಲ್ಲಿ, ಚಲನಚಿತ್ರ ಸಂಬಂಧಿತ ಚಟುವಟಿಕೆಗಳ ವ್ಯಾಪ್ತಿಯ ಹೊರಗೆ ಸಂಭವಿಸಿದೆ. ದಯವಿಟ್ಟು ಈ ಘಟನೆಯನ್ನು ‘ಕಾಂತಾರ ಚಾಪ್ಟರ್ 1ʼ ಚಿತ್ರ ಅಥವಾ ಅದರ ಸಿಬ್ಬಂದಿಯೊಂದಿಗೆ ಯಾವುದೇ ಸಂಬಂಧವನ್ನು ಕಲ್ಪಿಸಬಾರದು ಎಂದು ನಾವು ವಿನಂತಿಸುತ್ತೇವೆ” ಎಂದು ಹೊಂಬಾಳೆ ಸಂಸ್ಥೆ ಸ್ಪಷ್ಟನೆ ನೀಡಿದೆ.
ಕುಂದಾಪುರದಲ್ಲಿ ಭಾರಿ ಸೆಟ್ ನಿರ್ಮಾಣ ಮಾಡಿ ‘ಕಾಂತಾರ 1ʼ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಭಾರೀ ಸಂಖ್ಯೆಯ ಸಹಕಲಾವಿದರನ್ನು ಚಿತ್ರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು. ಈ ವರ್ಷದ ಅಕ್ಟೋಬರ್ 2ರಂದು ತೆರೆಗೆ ಬರಲಿದೆ.
ʼಕಾಂತಾರʼ ಚಿತ್ರದ ಕಥೆ ನಡೆಯುವುದಕ್ಕೆ ಮೊದಲು ಏನಾಗಿತ್ತು ಎನ್ನುವುದನ್ನು ಈ ಭಾಗದಲ್ಲಿ ರಿಷಬ್ ಶೆಟ್ಟಿ ವಿವರಿಸಲಿದ್ದಾರೆ. ಹಾಲಿವುಡ್ ತಂತ್ರಜ್ಞರು ಈ ಸಿನಿಮಾಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದ್ಧೂರಿಯಾಗಿ ಚಿತ್ರ ಮೂಡಿ ಬರುತ್ತಿದ್ದು, ಬರೋಬ್ಬರಿ 125 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ವಿಶೇಷ ಎಂದರೆ ರಿಷಬ್ ಶೆಟ್ಟಿ ಅವರನ್ನು ಬಿಟ್ಟು ಇನ್ನುಳಿದಂತೆ ಯಾರೆಲ್ಲ ನಟಿಸುತ್ತಿದ್ದಾರೆ ಎನನುವ ಗುಟ್ಟನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಕನ್ನಡ ಜತೆಗೆ ವಿವಿಧ ಭಾಷೆಗಳಲ್ಲಿ ಇದು ರಿಲೀಸ್ ಆಗಲಿದೆ.