ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru news) ಕನ್ನಡ ಭಾಷಿಗರಿಗೇ ಅವಮಾನ ಮಾಡುವ ರೂಢಿ ಮುಂದುವರಿದಿದೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ, ಕೋರಮಂಗಲದ ಹೋಟೆಲ್ ಒಂದರ ಡಿಸ್ಪ್ಲೇ ಬೋರ್ಡ್ನಲ್ಲಿ (Hotel Display board) ಕನ್ನಡಿಗರ (Kannadiga) ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿ ಅವಮಾನ (Insult to kannada) ಮಾಡಿರುವ ಘಟನೆ ನಡೆದಿದೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ತನಿಖೆಗೆ ಆಗ್ರಹಿಸಲಾಗಿದೆ.
ಕೋರಮಂಗಲದ ಹೋಟೆಲ್ ಒಂದರಲ್ಲಿ ನಡೆದ ಈ ಘಟನೆ ಕನ್ನಡಿಗರ ಅವಮಾನ ಮಾಡುವ ಉದ್ದೇಶದಿಂದಲೇ ಮಾಡಲಾಗಿದೆ ಎಂಬ ಅನುಮಾನ ಮೂಡಿದೆ. ಬೋರ್ಡ್ ಮೇಲೆ “KANNADIGA M***” ಎಂದು ಬರೆಯಲಾಗಿದ್ದು, ಇದರಿಂದ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಡಿಸ್ಪ್ಲೇ ಬೋರ್ಡ್ನಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯ ಪದಗಳಿಂದ ಅವಹೇಳನ ಮಾಡಲಾಗಿದೆ. ನಿನ್ನೆ ರಾತ್ರಿ ಈ ಬರಹ ಕಂಡುಬಂದಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಈ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಟೆಲ್ನಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಡಿವಾಳ ಇನ್ಸ್ಪೆಕ್ಟರ್ ಮೊಹಮ್ಮದ್ ಹೋಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಅವಹೇಳನಕಾರಿ ಬರಹದ ಬಳಿಕ ಬೋರ್ಡ್ ತೆರವು ಮಾಡಲಾಗಿದೆ. ತಕ್ಷಣವೇ ಬೋರ್ಡ್ ತೆರವು ಮಾಡಿದ ಹೋಟೆಲ್ ಸಿಬ್ಬಂದಿ ಇದು ನಮ್ಮ ಕೆಲಸವಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಅಸ್ಸಾಂ ಮೂಲದ ಅಬ್ದುಲ್ ಎಂಬಾತ ಮತ್ತು ಹೋಟೆಲ್ ಮ್ಯಾನೇಜರ್ರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ. ಡಿಸ್ಪ್ಲೇ ಬೋರ್ಡ್ ಅನ್ನು ಖಾಕಿ ವಶಕ್ಕೆ ಪಡೆದಿದೆ. ಈ ಹೊಟೇಲ್ ಕೇರಳ ಮೂಲದ ನೌಷದ್ ಎಂಬುವವರಿಗೆ ಸೇರಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಡಿಸ್ಪ್ಲೇ ಬೋರ್ಡ್ ನಮ್ಮ ನಿಯಂತ್ರಣದಲ್ಲಿ ಇಲ್ಲ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದು, ಹ್ಯಾಕ್ ಮಾಡಿ ಈ ರೀತಿಯ ಕೃತ್ಯ ನಡೆದಿರಬಹುದು ಎಂದಿದ್ದಾರೆ. ಮಡಿವಾಳ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಲು ಮುಂದಾಗಿದ್ದು, ಮ್ಯಾನೇಜರ್ ಅನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Sonu Nigam: ಕನ್ನಡ ಹಾಡಿಗೂ ಪಹಲ್ಗಾಂ ದಾಳಿಗೂ ಏನು ಸಂಬಂಧ? ಸೋನು ನಿಗಮ್ ಮಾತಿಗೆ ರೊಚ್ಚಿಗೆದ್ದ ಕನ್ನಡಿಗರು