ಬೆಂಗಳೂರು: ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಅಭಿಮಾನಿಗಳಿಗೆ ಭಾರಿ ನಿರಾಶೆಯಾಯಿತು. ಶನಿವಾರ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ (RCB vs KKR) ನಡುವಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ 58ನೇ ಪಂದ್ಯಕ್ಕೆ ಮಳೆಗೆ ಬಲಿಯಾಯಿತು. ನಿರಂತರವಾಗಿ ಮಳೆ ಬೀಳುತ್ತಿದ್ದ ಕಾರಣ ಪಂದ್ಯ ಟಾಸ್ ಕಾಣದೆ ರದ್ದಾಯಿತು. ಆ ಮೂಲಕ ಉಭಯ ತಂಡಗಳು ಒಂದೊಂದು ಅಂಕವನ್ನು ಹಂಚಿಕೊಂಡಿವೆ. ಆರ್ಸಿಬಿ (Royal Challengers bengaluru) 17 ಅಂಕಗಳೊಂದಿಗೆ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನಕ್ಕೇರಿದರೆ, ಒಂದು ಅಂಕ ಪಡೆದರೂ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ಪ್ಲೇಆಫ್ಸ್ ರೇಸ್ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯ ಪರಿಸ್ಥಿತಿಯ ಕಾರಣ ಐಪಿಎಲ್ ಟೂರ್ನಿಯನ್ನು ಒಂದು ವಾರ ಕಾಲ ನಿಲ್ಲಿಸಲಾಗಿತ್ತು. ಇದೀಗ ಆರ್ಸಿಬಿ ಮತ್ತು ಕೆಕೆಆರ್ ನಡುವಣ ಪಂದ್ಯದ ಮೂಲಕ ಟೂರ್ನಿಯನ್ನು ಪುನರಾರಂಭ ಮಾಡಲು ಬಿಸಿಸಿಐ ಬಯಸಿತ್ತು. ಅದರಂತೆ 10 ದಿನಗಳ ವಿರಾಮದ ಬಳಿಕ ಆರ್ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ, ಇದಕ್ಕೆ ಮಳೆರಾಯ ಅವಕಾಶ ಮಾಡಿಕೊಡಲಿಲ್ಲ. ಪಂದ್ಯದಲ್ಲಿ ಟಾಸ್ಗೂ ವರುಣ ಚಾನ್ಸ್ ನೀಡಲಿಲ್ಲ. ನಿರಂತರವಾಗಿ ಮಳೆ ಸುರಿಯುತ್ತಿದ್ದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಆ ಮೂಲಕ ಎರಡೂ ತಂಡಗಳಿಗೆ ಒಂದೊಂದು ಅಂಕವನ್ನು ಹಂಚಲಾಯಿತು.
IPL 2025: ʻಆರ್ಸಿಬಿ ಫೈನಲ್ಗೆ ಪ್ರವೇಶಿಸಿದರೆ ಸ್ಟೇಡಿಯಂಗೆ ಬರುತ್ತೇನೆʼ-ಫ್ಯಾನ್ಸ್ಗೆ ಎಬಿಡಿ ಭರವಸೆ!
ಅಗ್ರ ಸ್ಥಾನಕ್ಕೇರಿದ ಆರ್ಸಿಬಿ
ಅಂದ ಹಾಗೆ ಆರ್ಸಿಬಿಯ 12 ಪಂದ್ಯಗಳು ಅಂತ್ಯವಾಗಿದ್ದು 8 ರಲ್ಲಿ ಗೆಲುವು ಪಡೆದಿದ್ದು, ಇನ್ನೊಂದು ಪಂದ್ಯ ಮಳೆಯಿಂದ ಫಲಿತಾಂಶ ಕಾಣದೆ ಅಂತ್ಯವಾಗಿದೆ. ಇದೀಗ 17 ಅಂಕಗಳನ್ನು ಪಡೆಯುವ ಮೂಲಕ ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಇನ್ನು ಕೆಕೆಆರ್ ತಂಡ, 13 ಪಂದ್ಯಗಳಿಂದ 12 ಅಂಕಗಳನ್ನು ಕಲೆ ಹಾಕಿದರೂ ಆರನೇ ಸ್ಥಾನದಲ್ಲಿಯೇ ಉಳಿದಿದೆ ಹಾಗೂ ಬಹುತೇಕ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ನಿಂದ ಹೊರ ಬಿದ್ದಿದೆ.
ಇತ್ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಾಕೋಬ್ ಬೆಥೆಲ್/ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ರೊಮ್ಯಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಾಸಿಖ್ ದರ್ ಸಲಾಮ್/ಲುಂಗಿ ಎನ್ಗಿಡಿ, ಯಶ್ ದಯಾಳ್, ಸುಯೇಶ್ ಶರ್ಮಾ
ಕೋಲ್ಕತಾ ನೈಟ್ ರೈಡರ್ಸ್: ರೆಹಮಾನುಲ್ಲಾ ಗುರ್ಬಝ್ (ವಿ.ಕೀ), ಸುನೀಲ್ ನರೇನ್, ಅಜಿಂಕ್ಯ ರಹಾನೆ (ನಾಯಕ), ಅಂಗ್ಕ್ರಿಷ್ ರಘುವಂಶಿ, ಮನೀಷ್ ಪಾಂಡೆ/ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣ್ದೀಪ್ ಸಿಂಗ್, ಅನುಕುಲ್ ರಾಯ್, ವೈಭವ್ ಅರೋರಾ, ವರುಣ್ ಸಿವಿ, ಹರ್ಷಿತ್ ರಾಣಾ