ಬೆಂಗಳೂರು: ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, ಎಸ್. ಭಗತ್ ರಾಜ್ ನಿರ್ದೇಶನದ ಹಾಗೂ ಪ್ರವೀಣ್ ನಾಯಕನಾಗಿ ನಟಿಸಿರುವ ʼಠಾಣೆʼ ಚಿತ್ರದ (Kannada New Movie) ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ನಟಿ ಮಾಲತಿ ಸುಧೀರ್ ಅವರು ʼಠಾಣೆʼ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯದರ್ಶಿ ಸಂತೋಷ್ ಹಾನಗಲ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೈಲರ್ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಮೇ 30ರಂದು ಬಿಡುಗಡೆಯಾಗಲಿದೆ. ಟ್ರೈಲರ್ ಬಿಡುಗಡೆ ನಂತರ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾತನಾಡಿದರು.
ʼಠಾಣೆʼ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಹಿರಿಯ ನಟಿ ಮಾಲತಿ ಸುಧೀರ್ ಅವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ದೇಶಕ ಭಗತ್ ರಾಜ್, ʼಠಾಣೆʼ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರ. ʼಠಾಣೆʼ ಎಂದರೆ ಪೊಲೀಸ್ ಸ್ಟೇಷನ್. ಆ ಪೊಲೀಸ್ ಠಾಣೆಯ ಒಂದು ಕೇಸ್ ಕುರಿತು ನಾಲ್ಕು ಪ್ರಮುಖ ಪಾತ್ರಗಳ ಕುರಿತು ನಡೆಯುವ ಕಥಾಹಂದರ ಹೊಂದಿರುವ ಚಿತ್ರವೇ ʼಠಾಣೆʼ. ಈ ಚಿತ್ರದಲ್ಲಿ ತಂದೆ – ಮಗನ, ಅಣ್ಣ – ತಂಗಿಯ ಸೆಂಟಿಮೆಂಟ್ ಇದೆ. ಇದೊಂದು ಲವ್ ಸ್ಟೋರಿ ಕೂಡ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳುಳ್ಳ ಈ ಚಿತ್ರಕ್ಕ ʼC/O ಶ್ರೀರಾಮಪುರʼ ಎಂಬ ಅಡಿಬರಹವಿದೆ. ಇದೇ ಮೇ 30ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ನಾನು ಮೂಲತಃ ರಂಗಭೂಮಿ ಕಲಾವಿದ. ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ʼಠಾಣೆʼ. ಈ ಚಿತ್ರದ ಟ್ರೈಲರ್ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಾಲತಿ ಸುಧೀರ್ ಅವರಿಂದ ಅನಾವರಣವಾಗಿದ್ದು ತುಂಬಾ ಸಂತೋಷವಾಗಿದೆ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಕಾಳಿ ಎಂದು ನಾಯಕ ಪ್ರವೀಣ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Beauty Trend: ಅತ್ಯಾಕರ್ಷಕ ಮೇಕಪ್ಗೆ ಲಿಪ್ ಪೆನ್ಸಿಲ್ ಸಾಥ್
ಇಡೀ ತಂಡಕ್ಕೆ ಹಾಗೂ ಆಗಮಿಸಿದ ಗಣ್ಯರಿಗೆ ನಿರ್ಮಾಪಕಿ ಗಾಯತ್ರಿ ಧನ್ಯವಾದ ಹೇಳಿದರು. ಚಿತ್ರದಲ್ಲಿ ಅಭಿನಯಿಸಿರುವ ರೋಹಿತ್ ನಾಗೇಶ್, ಪಿ.ಡಿ. ಸತೀಶ್ ಚಂದ್ರ, ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಹಾಗೂ ವಿತರಕ ವಿಜಯ್ ಸೇರಿದಂತೆ ಚಿತ್ರತಂಡದ ಸದಸ್ಯರು ʼಠಾಣೆʼ ಚಿತ್ರದ ಕುರಿತು ಮಾತನಾಡಿದರು. ಪ್ರಶಾಂತ್ ಸಾಗರ್ ಛಾಯಾಗ್ರಹಣ ಹಾಗೂ ಹೆಸರಾಂತ ಸಂಕಲನಕಾರ ಸುರೇಶ್ ಅರಸ್ ಅವರ ಸಂಕಲನ ಈ ಚಿತ್ರಕ್ಕಿದೆ.