ಲಖನೌ: ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್, ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 6 ವಿಕೆಟ್ ಸೋಲಿನೊಂದಿಗೆ ತನ್ನ ಪಯಣವನ್ನು ಮುಗಿಸಿದೆ. ಆದರೆ ತಂಡದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ (Mitchell Marsh) ಟೂರ್ನಿಯಲ್ಲಿ 13 ಪಂದ್ಯಗಳಿಂದ 627 ರನ್ ಸಿಡಿಸಿ ಲಖನೌ ಪರ ಲೀಡಿಂಗ್ ಸ್ಕೋರರ್ ಆಗಿದ್ದಾರೆ. ಆ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಹೆಸರಿನಲ್ಲಿದ್ದ ಮಹತ್ತರ ದಾಖಲೆಯೊಂದನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಆರ್ಸಿಬಿ ಮೊದಲನೇ ಕ್ವಾಲಿಫೈಯರ್ಗೆ ಅರ್ಹತೆಯನ್ನು ಪಡೆದುಕೊಂಡಿದೆ.
ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಮ್ ಅವರೊಂದಿಗೆ ಆರಂಭಿಕ ಆಟಗಾರನಾಗಿ ಕ್ರೀಸ್ಗೆ ಬಂದ ಮಿಚೆಲ್ ಮಾರ್ಷ್ ರನ್ ಹೊಳೆ ಹರಿಸಿ ತಂಡದ ಹಲವು ಪಂದ್ಯಗಳ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ತಮ್ಮ ಇಡೀ ಐಪಿಎಲ್ ವೃತ್ತಿ ಜೀವನದಲ್ಲಿ ಮಾರ್ಷ್ ಇದುವರೆಗೂ 42 ಪಂದ್ಯಗಳಿಂದ 665 ರನ್ ಬಾರಿಸಿದ್ದರು. ಆದರೆ ಇದೊಂದೇ ಆವೃತ್ತಿಯಲ್ಲಿ 6 ಅರ್ಧಶತಕ ಹಾಗೂ ಚೊಚ್ಚಲ ಶತಕ ಸಿಡಿಸುವ ಮೂಲಕ 627 ರನ್ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನದ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ.
IPL 2025: ಗೆಲುವಿನೊಂದಿಗೆ ನೂತನ ದಾಖಲೆ ಬರೆದ ಆರ್ಸಿಬಿ
ಕೆಎಲ್ ರಾಹುಲ್ ದಾಖಲೆ
ಲಖನೌ ಸೂಪರ್ ಜಯಂಟ್ಸ್ ಪರ ಏಕೈಕ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ 616 ರನ್ ಗಳಿಸಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಇದೀಗ ಕೆಎಲ್ ರಾಹುಲ್ ದಾಖಲೆಯನ್ನು ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ಮುರಿದಿದ್ದಾರೆ. ಕೆಎಲ್ ರಾಹುಲ್ಗಿಂತ ಮಿಚೆಲ್ ಮಾರ್ಷ್ 11 ರನ್ ಹೆಚ್ಚು ಗಳಿಸಿದ್ದಾರೆ.
ಎಲ್ಎಸ್ಜಿ ಪರ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು
* 627 ರನ್- ಮಿಚೆಲ್ ಮಾರ್ಷ್ -13 ಇನಿಂಗ್ಸ್ – 2025
* 616 ರನ್- ಕೆಎಲ್ ರಾಹುಲ್ – 15 ಇನಿಂಗ್ಸ್ – 2022
* 524 ರನ್- ನಿಕೋಲಸ್ ಪೂರನ್ – 14 ಇನಿಂಗ್ಸ್ – 2025
* 520 ರನ್- ಕೆಎಲ್ ರಾಹುಲ್ – 14 ಇನಿಂಗ್ಸ್ -2024
* 508 ರನ್- ಕ್ವಿಂಟನ್ ಡಿ ಕಾಕ್ – 15 ಇನಿಂಗ್ಸ್ – 2022
RCB vs LSG: ತಮ್ಮ ಬ್ಯಾಟಿಂಗ್ ಯಶಸ್ಸಿಗೆ ಈ ದಿಗ್ಗಜನೇ ಕಾರಣ ಎಂದ ಜಿತೇಶ್ ಶರ್ಮಾ!
ತ್ರಿಮೂರ್ತಿಗಳ ಬ್ಯಾಟಿಂಗ್ ಅಬ್ಬರ
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್ ಸತತ ವೈಫಲ್ಯಗಳಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ (118* ರನ್)ದ ಮೂಲಕ ಗಮನ ಸೆಳೆದರು. ಇಡೀ ಟೂರ್ನಿಯಲ್ಲಿ ಲಖನೌ ಪರ ಮಿಚೆಲ್ ಮಾರ್ಷ್ (627 ರನ್), ನಿಕೋಲಸ್ ಪೂರನ್ (524 ರನ್) ಹಾಗೂ ಏಡೆನ್ ಮಾರ್ಕ್ರಮ್ (445 ರನ್) ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಅತಿ ಹೆಚ್ಚು ರನ್ಗಳನ್ನು ಗಳಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
RCB vs LSG: ಶತಕ ಸಿಡಿಸಿ ಪಲ್ಟಿ ಹೊಡೆದು ವಿಚಿತ್ರವಾಗಿ ಸಂಭ್ರಮಿಸಿದ ರಿಷಭ್ ಪಂತ್!
ಎಲ್ಎಸ್ಜಿಗೆ 6 ವಿಕೆಟ್ ಸೋಲು
ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತರೂ ಲಖನೌ ಸೂಪರ್ ಜಯಂಟ್ಸ್ ನಾಯಕ ರಿಷಭ್ ಪಂತ್ (118* ರನ್) ಹಾಗೂ ಮಿಚೆಲ್ ಮಾರ್ಷ್ (61 ರನ್) ಅವರ ಸ್ಫೋಟಕ ಆಟದ ನೆರವಿನಿಂದ 227 ಸವಾಲಿನ ಮೊತ್ತ ದಾಖಲಿಸಿತ್ತು. ಈ ಕಠಿಣ ಗುರಿಯನ್ನು ಆರ್ಸಿಬಿ, ಜಿತೇಶ್ ಶರ್ಮಾ (85* ರನ್), ವಿರಾಟ್ ಕೊಹ್ಲಿ (54 ರನ್) ಹಾಗೂ ಮಯಾಂಕ್ ಅಗರ್ವಾಲ್ (41* ರನ್) ಅವರ ಬ್ಯಾಟಿಂಗ್ ನೆರವಿನಿಂದ 18.3 ಓವರ್ಗಳಲ್ಲಿ 4 ವಿಕೆಟ್ ನಷ್ಟ್ಕಕ್ಕೆ 230 ರನ್ ಗಳಿಸಿ ಗೆಲುವು ಸಾಧಿಸಿತು.