
ಜಿಲ್ಲೆಯ ರೈತರಿಗೆ ಮುಂಗಾರು ಆಶಾದಾಯಕ; ಜಿಲ್ಲೆಯಲ್ಲಿ 2,81,595 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಗುರಿ; ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ ವಿತರಣೆ ಆರಂಭ; ಅಗತ್ಯ ದಾಸ್ತಾನು ಲಭ್ಯವಿದೆ: ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ
ಧಾರವಾಡ .30: ಧಾರವಾಡ ಜಿಲ್ಲೆಯಾದ್ಯಂತ ಮುಂಗಾರು ಮಳೆ ಆಶಾದಾಯಕವಾಗಿದ್ದು, ಪೂರ್ವ ಮುಂಗಾರು ಹಂಗಾಮಿನಲ್ಲಿ ಮೇ 29, 2025 ರವರೆಗೆ ಒಟ್ಟು ಜಿಲ್ಲೆಯಲ್ಲಿ 113.3 ಎಮ್ಎಮ್ ಇದ್ದ ವಾಡಿಕೆ ಮಳೆ, ವಾಡಿಕೆಗಿಂತ ಹೆಚ್ಚಿಗೆ ಅಂದರೆ 221.4 ಎಮ್ಎಮ್ ಮಳೆಯಾಗಿರುತ್ತದೆ. ರೈತರು ಕೃಷಿ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದು ಬಿತ್ತನೆಗೆ ಅಗತ್ಯ ಬೀಜ, ಗೊಬ್ಬರ ಪೂರೈಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಹೇಳಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯ ಗುರಿಯನ್ನು 2,81,595 ಹೆಕ್ಟೆರ್ ಪ್ರದೇಶದಲ್ಲಿ ಹೊಂದಲಾಗಿದೆ.ಬಿತ್ತನೆಯು ಅಳ್ನಾವರ ತಾಲೂಕಿನಲ್ಲಿ 5,686 ಹೆಕ್ಟೆರ್, ಧಾರವಾಡ ತಾಲೂಕಿನಲ್ಲಿ 58,029 ಹೆಕ್ಟೆರ್, ಕಲಘಟಗಿ ತಾಲೂಕಿನಲ್ಲಿ 37,869 ಹೆಕ್ಟೆರ್, ಹುಬ್ಬಳ್ಳಿ ತಾಲೂಕಿನಲ್ಲಿ 35,766 ಹೆಕ್ಟೆರ್, ಹುಬ್ಬಳ್ಳಿ ನಗರ ತಾಲೂಕಿನಲ್ಲಿ 6,719 ಹೆಕ್ಟೆರ್, ಕುಂದಗೋಳ ತಾಲೂಕಿನಲ್ಲಿ 52,298 ಹೆಕ್ಟೆರ್, ನವಲಗುಂದ ತಾಲೂಕಿನಲ್ಲಿ 59,042 ಹೆಕ್ಟೆರ್, ಅಣ್ಣಿಗೇರಿ ತಾಲೂಕಿನಲ್ಲಿ 26,186 ಹೆಕ್ಟೆರ್ ಹೀಗೆ ಒಟ್ಟು 2,81,595 ಹೆಕ್ಟೆರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ರೈತರು ತಮ್ಮ ಭೂಮಿಗಳನ್ನು ಹದಗೊಳಿಸಿಕೊಂಡು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಕೃಷಿ ಇಲಾಖೆಯಿಂದ ಒಟ್ಟು 31 ವಿತರಣಾ ಕೇಂದ್ರದ ಮುಖಾಂತರ ಸಹಾಯಧನದಲ್ಲಿ ಮುಂಗಾರು ಬಿತ್ತನೆ ಬೀಜಗಳ ವಿತರಣೆ ಪ್ರಗತಿಯಲ್ಲಿದ್ದು ಇಲ್ಲಿಯವರೆಗೆ, 36.79.31 ಕ್ವಿಂಟಾಲ್ ಬೀಜ ವಿತರಣೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. *ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಬೀಜಗಳ ವಿತರಣೆ ವಿವರ:* ಸೋಯಾ ಅವರೆ 3113.55 ಕ್ವಿಂಟಾಲ್, ಮುಸುಕಿನ ಜೋಳ 180.78 ಕ್ವಿಂಟಾಲ್, ಶೇಂಗಾ 39 ಕ್ವಿಂಟಾಲ್, ಹೆಸರು 233.85 ಕ್ವಿಂಟಾಲ್, ಉದ್ದು 82.78 ಕ್ವಿಂಟಾಲ್, ಭತ್ತ 26.5 ಕ್ವಿಂಟಾಲ್, ತೊಗರಿ 2.85 ಕ್ವಿಂಟಾಲ್ ಒಟ್ಟು 36.79.31 ಕ್ವಿಂಟಾಲ್ ಬೀಜ ವಿತರಣೆ ಮಾಡಲಾಗಿದೆ. ಹಾಗೂ ಒಟ್ಟು 4751.71 ಕ್ವಿಂಟಾಲ್ ಬೀಜ ದಾಸ್ತಾನು ಇದೆ. ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಿಗೆ 49,471.08 ಮೆಟ್ರಿಕ್ಟನ್ಗಳಷ್ಟು ರಸಗೊಬ್ಬರಗಳ ಬೇಡಿಕೆಯಿದ್ದು, ಈಗಾಗಲೇ ಜಿಲ್ಲೆಯಾದ್ಯಂತ 37,476.11 ಮೆಟ್ರಿಕ್ಟನ್ಗಳಷ್ಟು ಪೂರೈಕೆ ಆಗಿದೆ. ಇಲ್ಲಿಯವರೆಗೆ 19567.87 ಮೆಟ್ರಿಕ್ಟನ್ಗಳಷ್ಟು ರಸಗೊಬ್ಬರ ಮಾರಾಟವಾಗಿದ್ದು, 17908.24 ಮೆಟ್ರಿಕ್ಟನ್ಗಳಷ್ಟು ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿ.ಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಆದರೆ, ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೋಟ್ಯಾಷ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೋಟ್ಯಾಷ ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ ಎಂದರು.ಶಿಫಾರಸ್ಸಿನಂತೆ ಬೆಳೆಗಳಿಗೆ ಸಾರಜನಕ : ರಂಜಕ : ಪೋಟ್ಯಾಷ ರಸಗೊಬ್ಬರಗಳನ್ನು 4 : 2 : 1ರ ಅನುಪಾತದಲ್ಲಿ ಬಳಸಬೇಕಾಗಿರುತ್ತದೆ. ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಡಿ.ಎ.ಪಿ. ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಪೋಟ್ಯಾಷ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26, 12:32:16, 22:22:11, 14:35:14, 17:17:17, 14:28:14, 19:19:19, 20:10:10 ಇತ್ಯಾದಿ ರಸಗೊಬ್ಬರಗಳನ್ನೂ ಸಹ ಬಳಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.ಮೇ ಅಂತ್ಯದವರೆಗೆ ಒಟ್ಟು 5078 ಮೆಟ್ರಿಕ್ಟನ್ಗಳಷ್ಟು ಡಿ.ಎ.ಪಿ. ಗೊಬ್ಬರದ ಬೇಡಿಕೆ ಇದ್ದು, ಇಲ್ಲಿಯವರೆಗೆ 5704 ಮೆಟ್ರಿಕ್ಟನ್ಗಳಷ್ಟು ಜಿಲ್ಲೆಗೆ ಡಿ.ಎ.ಪಿ. ಗೊಬ್ಬರ ಪೂರೈಕೆಯಾಗಿದೆ. ಇದರ ಜೊತೆಗೆ ಮುಂದಿನ 3 ದಿನಗಳಲ್ಲಿ 2000 ಮೆಟ್ರಿಕ್ಟನ್ಗಳಷ್ಟು ಡಿ.ಎ.ಪಿ. ಗೊಬ್ಬರ ಪೂರೈಕೆಯಾಗಲಿದೆ. ಹಾಗೂ ಜಿಲ್ಲೆಯಲ್ಲಿ 8000 ಮೆಟ್ರಿಕ್ಟನ್ಗಳಷ್ಟು ಸಂಯುಕ್ತ (ಕಾಂಪ್ಲೆಕ್ಸ್) ಗೊಬ್ಬರಗಳ ದಾಸ್ತಾನು ಇರುತ್ತದೆ. ಹಾಗಾಗಿ ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ರೈತರು ಅಗತ್ಯವಾಗಿರುವ ಪರ್ಯಾಯ ರಸಗೊಬ್ಬರಗಳನ್ನು ಖರೀದಿಸುತಿದ್ದು, ರೈತರಿಂದ ಉತ್ತಮ ಸ್ಪಂದನೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.