ನವದೆಹಲಿ: ಬಾಲಿವುಡ್ನ ಯಶಸ್ವಿ ಸಿನಿಮಾಗಳಲ್ಲಿ ‘ಹೇರಾ ಫೇರಿ’ (Hera Pheri) ಕೂಡ ಒಂದು. ಬ್ಲಾಕ್ ಬ್ಲಸ್ಟರ್ ಹಿಟ್ ಸಿನಿಮಾ ʼಹೇರಾ ಫೇರಿʼ ಎಂದಾಗ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಪರೇಶ್ ರಾವಲ್ ಅವರ ಕಾಮಿಡಿ ಆ್ಯಕ್ಟಿಂಗ್ ಸೀನ್ ನೆನಪಿಗೆ ಬರುತ್ತವೆ. ʼಹೇರಾ ಫೇರಿʼ, ʼಫಿರ್ ಹೇರಾ ಫೇರಿʼ ಸಕ್ಸಸ್ ಬಳಿಕ ʼಹೇರಾ ಫೇರಿ 3ʼ ಚಿತ್ರೀಕರಣ ನಡೆಯುತ್ತಿದೆ. ಇದರ ನಡುವೆ ʼಹೇರಾ ಫೇರಿ 3ʼ ಚಿತ್ರದಿಂದ ನಟ ಪರೇಶ್ ರಾವಲ್ ದಿಢೀರನೆ ನಿರ್ಗಮಿಸಿದ್ದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ನಟ ಪರೇಶ್ ಪಾತ್ರವನ್ನು ಮತ್ಯಾರು ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆ ಉಂಟಾಗಿತ್ತು. ಅದರ ಬೆನ್ನಲ್ಲೆ ಪಂಕಜ್ ತ್ರಿಪಾಠಿ ಹೆಸರು ಮುನ್ನಲೆಗೆ ಬಂದಿದೆ.
ʼಹೇರಾ ಫೇರಿʼಯಲ್ಲಿ ಬಾಬು ಭೈಯಾ ಎಂದೂ ಕರೆಯಲ್ಪಡುವ ಬಾಬುರಾವ್ ಪಾತ್ರದಲ್ಲಿ ಪರೇಶ್ ರಾವಲ್ ಮಿಂಚಿದ್ದರು. ಇವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಪರೇಶ್ ಅವರ ಹಾಸ್ಯ ಪ್ರಜ್ಞೆ, ಕಾಮಿಡಿ ಟೈಮಿಂಗ್ ‘ಹೇರಾ ಫೇರಿ’ ಚಿತ್ರದ ಮುಖ್ಯ ಭಾಗವಾಗಿತ್ತು. ಆದರೆ ಇದೀಗ ಚಿತ್ರದ ಮೂರನೇ ಭಾಗದಿಂದ ಹೊರ ನಡೆದಿದ್ದಾರೆ. ʼಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ನಿರ್ಗಮಿಸುತ್ತಿದ್ದಂತೆ ಬಾಬುರಾವ್ ಪಾತ್ರಕ್ಕೆ ಪಂಕಜ್ ತ್ರಿಪಾಠಿ ಅವರ ಹೆಸರು ಕೇಳಿ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪಂಕಜ್ ತ್ರಿಪಾಠಿಯನ್ನು ಬಾಬುರಾವ್ ಪಾತ್ರದಲ್ಲಿ ಕಲ್ಪಿಸಿಕೊಂಡು ಎಐ ತಂತ್ರಜ್ಞಾನದ ಮೂಲಕ ಚಿತ್ರವೊಂದನ್ನು ರಚಿಸಲಾಗಿದ್ದು ವೈರಲ್ ಆಗಿದೆ.
ವೈರಲ್ ಆಗಿರುವ ಎಐ ಫೋಟೊದಲ್ಲಿ ತ್ರಿಪಾಠಿ ಬಿಳಿ ಧೋತಿ ಮತ್ತು ಬನಿಯನ್ ಧರಿಸಿದ್ದಾರೆ. ಹಾಗೆಯೇ ದಪ್ಪ ಕನ್ನಡಕ, ಚಿನ್ನದ ಸರ ಮತ್ತು ಬಳೆ ಧರಿಸಿರುವುದನ್ನು ಕಾಣಬಹುದು. ಪಂಕಜ್ ತ್ರಿಪಾಠಿ ʼಹೇರಾ ಫೇರಿʼಯಲ್ಲಿ ಬಾಬುರಾವ್ ಪಾತ್ರವನ್ನು ನಿರ್ವಹಿಸಬಹುದೇ? ಎಂಬ ಶೀರ್ಷಿಕೆಯೊಂದಿಗೆ ರೆಡ್ಡಿಟ್ನಲ್ಲಿ ಈ ಪೋಟೋ ಹಂಚಿಕೊಳ್ಳಲಾಗಿದೆ.
ಇದನ್ನು ಓದಿ: Kurudu Kanchana Movie: ʼಕುರುಡು ಕಾಂಚಾಣʼ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ ರಾಕ್ ಸ್ಟಾರ್ ರೋಹಿತ್
ವೈರಲ್ ಫೋಟೊಕ್ಕೆ ಅಭಿಮಾನಿಯೊಬ್ಬರು, ಪಂಕಜ್ ತ್ರಿಪಾಠಿ ಉತ್ತಮ ನಟ. ಆದರೆ ಅವರೆಂದೂ ಪರೇಶ್ ರಾವಲ್ ಪಾತ್ರ ನಿಭಾಯಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಪರೇಶ್ ರಾವಲ್ ಇಲ್ಲದಿದ್ದರೆ, ಹೊಸ ಪಾತ್ರ, ಹೊಸ ಹೆಸರು ನೀಡಿ ಚಿತ್ರಕ್ಕೆ ಬೇರೆ ಶೈಲಿ ನೀಡಲಿ. ಪಂಕಜ್ ತ್ರಿಪಾಠಿ ಒಳ್ಳೆಯ ನಟ, ಆದರೆ ಪರೇಶ್ ರಾವಲ್ ಪಾತ್ರವನ್ನು ನಿಖರವಾಗಿ ನಿಭಾಯಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಮತ್ತೊಬ್ಬ ಅಭಿಮಾನಿ ಹೇಳಿದ್ದಾರೆ.