ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಗೊಂಡವರಿಗೆ ಸಹಾಯ ನಿಧಿಯನ್ನು ಸ್ಥಾಪಿಸುವುದಾಗಿ ತಿಳಿಸಿದೆ. ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದರು.
“ಬೆಂಗಳೂರಿನಲ್ಲಿ ನಡೆದ ದುರದೃಷ್ಟಕರ ಘಟನೆ ಆರ್ಸಿಬಿ ಕುಟುಂಬಕ್ಕೆ ತೀವ್ರ ನೋವನ್ನುಂಟು ಮಾಡಿದೆ. ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ, ಮೃತರ ಹನ್ನೊಂದು ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ಆರ್ಸಿಬಿ ಘೋಷಿಸಿದೆ. ಇದಲ್ಲದೆ, ಈ ದುರಂತ ಘಟನೆಯಲ್ಲಿ ಗಾಯಗೊಂಡ ಅಭಿಮಾನಿಗಳನ್ನು ಬೆಂಬಲಿಸಲು ‘ಆರ್ಸಿಬಿ ಕೇರ್ಸ್’ ಎಂಬ ನಿಧಿಯನ್ನು ಸಹ ರಚಿಸಲಾಗುತ್ತಿದೆ. ನಮ್ಮ ಅಭಿಮಾನಿಗಳು ನಾವು ಮಾಡುವ ಎಲ್ಲದರಲ್ಲೂ ಯಾವಾಗಲೂ ಹೃದಯಭಾಗದಲ್ಲಿ ಇರುತ್ತಾರೆ. ನಾವು ದುಃಖದಲ್ಲಿ ಒಗ್ಗಟ್ಟಿನಿಂದ ಇರುತ್ತೇವೆ” ಎಂದು ಆರ್ಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಕೂಡ ಬುಧವಾರ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದರು.