ಅಮರಾವತಿ: ಆಂಧ್ರ ಪ್ರದೇಶದ ಸಚಿವೆ ಸವಿತಾ ಎಸ್. (Savitha S) ತಮಗೆ ನೀಡಿದ ಹೂ ಬೊಕೆಯನ್ನು ಅಧಿಕಾರಿಗಳತ್ತ ಎಸೆದು ವಿವಾದ ಹುಟ್ಟು ಹಾಕಿದ್ದಾರೆ. ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅವರು ತಮ್ಮ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಿಲ್ಲವೆಂಬ ಸಿಟ್ಟಿನಲ್ಲಿ ತಮಗೆ ನೀಡಿದ ಬೊಕೆಯನ್ನು ಅಧಿಕಾರಿಗಳತ್ತ ಎಸೆದಿದ್ದಾರೆ. 3 ದಿನಗಳ ಹಿಂದಿನ ಈ ವಿಡಿಯೊ ತಡವಾಗಿ ಬೆಳಕಿಗೆ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video). ಸಚಿವೆಯ ಈ ನಡೆಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಜಬಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಂತಹ ದುರ್ವತನೆ ತೋರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಇಂಡಿಯಾ ಟುಡೇ ವರದಿಯ ಪ್ರಕಾರ ಪಿಂಚಣಿ ವಿತರಣೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ತಮ್ಮ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ವಿತರಿಸಲಾದ ಉಚಿತ ಗ್ಯಾಸ್ ಸಿಲಿಂಡರ್ಗಳ ಸಂಖ್ಯೆಯ ಕುರಿತು ಸಚಿವೆ ಸವಿತಾ ಅವರು ಜಿಲ್ಲಾ ಅಧಿಕಾರಿ ಪ್ರಭಾವತಿ ಅವರನ್ನು ಪ್ರಶ್ನಿಸಿದರು. ಆದರೆ ಪ್ರಭಾವತಿ ಸ್ಪಷ್ಟ ಉತ್ತರವನ್ನು ನೀಡಲು ಹೆಣಗಾಡಿದ್ದಾರೆ. ಈ ವೇಳೆ ಸವಿತಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಅಸಮರ್ಪಕ ಉತ್ತರದಿಂದ ಕೋಪಗೊಂಡ ಸವಿತಾ ಅವರು ಅಧಿಕಾರಿ ಪ್ರಭಾವತಿ ನೀಡಿದ ಪುಷ್ಪಗುಚ್ಛವನ್ನು ಎಸೆಯುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಆನ್ಲೈನ್ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಅನೇಕರು ಸಚಿವೆಯ ಈ ನಡವಳಿಕೆಯನ್ನು ಟೀಕಿಸಿದ್ದಾರೆ ಮತ್ತು ಇಂತಹ ವರ್ತನೆ ಸಂಪುಟ ಸದಸ್ಯರಿಗೆ ಸರಿ ಹೊಂದುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ವೈರಲ್ ವಿಡಿಯೊ ವೈರಲ್ ಆಗಿದೆ:
🚨BIG BREAKING🚨
మంత్రి సవిత దురుసు ప్రవర్తన.. పెనుకొండ తహశీల్దార్ శ్రీధర్ ఇచ్చిన బోకేను విసిరేసిన మంత్రి సవిత
సత్యసాయి జిల్లా కలెక్టర్ చేతన్ సమక్షంలో ఘటన
మంత్రి సవిత తీరుపై సర్వత్రా విమర్శలు.. సోషల్ మీడియా లో వైరల్ గా మారిన మంత్రి సవిత దృశ్యాలు#AndhraPradesh… pic.twitter.com/l7uiMTLMsd
— Telugu Feed (@Telugufeedsite) June 7, 2025
ಈ ಸುದ್ದಿಯನ್ನೂ ಓದಿ: Viral News: ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಹಸೆಮಣೆಗೇರಿದ ವೃದ್ಧ ಜೋಡಿ; ಇಲ್ಲಿದೆ ಅಪರೂಪದ ಲವ್ಸ್ಟೋರಿ
ನೆಟ್ಟಿಗರಿಂದ ಆಕ್ರೋಶ
ʼʼಇಂತಹ ಅಹಂಕಾರದ ವರ್ತನೆ ಸಹಿಸಲು ಸಾಧ್ಯವಿಲ್ಲʼʼ ಎಂದು ಒಬ್ಬರು ಹೇಳಿದ್ದಾರೆ. ʼʼಈ ಸರ್ಕಾರವನ್ನು ಆರಿಸಿದ್ದಕ್ಕೆ ಈಗ ಅನುಭವಿಸಿʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಜತೆಗೆ ಅನೇಕರು ಸಚಿವೆಯ ವರ್ತನೆಯನ್ನು ಖಂಡಿಸಿದ್ದಾರೆ. ಸಾರ್ವಜನಿಕರ ಎದುರು ಅಧಿಕಾರಿಯೊಬ್ಬರಿಗೆ ಈ ರೀತಿ ಅವಮಾನ ಎಸಗಿದ್ದು ಸರಿಯಲ್ಲ ಎಂದಿದ್ದಾರೆ. ಹಲವರು ಸಚಿವೆ ಈ ಕೂಡಲೇ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಇಂಟರ್ನೆಟ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಯಾರು ಈ ಸವಿತಾ?
ಪೆನುಕೊಂಡ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ ಎಸ್.ಸವಿತಾ ಅವರು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ಸತ್ಯ ಸಾಯಿ ಜಿಲ್ಲೆಯ ಪೆನುಕೊಂಡ ಕ್ಷೇತ್ರದ ಮೊದಲ ಶಾಸಕಿ ಎನಿಸಿಕೊಂಡಿರುವ ಸವಿತಾ ಪೆನುಕೊಂಡದಲ್ಲಿ 1977ರಲ್ಲಿ ಜನಿಸಿದರು. ಅವರು 2024ರಲ್ಲಿ ನಡೆದ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಯಿಂದ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯ ಕೆ.ವಿ.ಊರ್ವಶಿ ಚರಣ್ ಅವರನ್ನು ಸೋಲಿಸಿದ್ದರು.
47 ವರ್ಷಗಳ ಸವಿತಾ ಪದವಿ ವಿದ್ಯಾರ್ಹತೆ ಹೊಂದಿದ್ದಾರೆ. ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಅವರು ತಮ್ಮ ಆಸ್ತಿ ಮೌಲ್ಯವನ್ನು 82.7 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಜತೆಗೆ ಅವರ ವಿರುದ್ಧ 10 ಕ್ರಿಮಿನಲ್ ಕೇಸ್ ದಾಖಲಾಗಿದೆ.