ಪ್ಯಾರಿಸ್: ಭಾರೀ ಕುತೂಹಲ ಮೂಡಿಸಿದ್ದ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್(French Open final)ನಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಸ್ಪೇನ್ನ ಕಾರ್ಲೋಸ್ ಅಲ್ಕರಾಜ್(Carlos Alcaraz) ಅವರು ವಿಶ್ವದ ನಂ.1 ಇಟಲಿಯ ಜಾನಿಕ್ ಸಿನ್ನರ್(Jannik Sinner)ಗೆ 6-4, 7-6(7-4), 6-4, 7-6(7-3), 7-6(10-2) ಅಂತರದ ಸೋಲಿನ ಆಘಾತವಿಕ್ಕಿ ಸತತ ಎರಡನೇ ಬಾರಿಗೆ ರೋಲ್ಯಾಂಡ್ ಗ್ಯಾರೋಸ್(Roland Garros)ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಗೆಲುವಿನೊಂದಿಗೆ ಅಲ್ಕರಾಜ್, 22 ವರ್ಷ ವಯಸ್ಸಿನಲ್ಲಿ 5ನೇ ಗ್ರ್ಯಾನ್ಸ್ಲಾಮ್ ಗೆದ್ದ ಎರಡನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಸ್ಪೇನ್ ದಿಗ್ಗಜ ರಫೆಲ್ ನಡಾಲ್ ಮೊದಲಿಗ.
ಭಾನುವಾರ ನಡೆದ 5 ಸೆಟ್ಗಳ ಅತ್ಯಂತ ಜಿದ್ದಾಜಿದ್ದಿನ ಫೈನಲ್ ಕಾದಾಟದಲ್ಲಿ 23 ವರ್ಷದ ಸಿನ್ನರ್, ಆರಂಭಿಕ ಸೆಟ್ ಅನ್ನು ಸುಲಭವಾಗಿ ಗೆದ್ದರು. ದ್ವಿತೀಯ ಸೆಟ್ನಲ್ಲಿ ಅಲ್ಕರಾಜ್ ತೀವ್ರ ಪೈಪೋಟಿ ನೀಡಿದ ಕಾರಣ ಟೈ ಬ್ರೇಕರ್ಗೆ ಸಾಗಿದ ಈ ಸೆಟ್ನಲ್ಲಿ ಕೊನೆಗೂ ಸಿನ್ನರ್ ಗೆಲುವು ಸಾಧಿಸಿದರು. ಆದರೆ ಮೂರನೇ ಸೆಟ್ನಲ್ಲಿ ತಿರುಗಿ ಬಿದ್ದ ಅಲ್ಕರಾಜ್ 6-4 ಅಂತರದಿಂದ ಗೆದ್ದು ಹೋರಾಟವನ್ನು ಜೀವಂತವಿರಿಸಿದರು. ನಾಲ್ಕನೇ ಸೆಟ್ನಲ್ಲಿ ಇನ್ನೇನು ಸಿನ್ನರ್ ಗೆದ್ದೇ ಬಿಟ್ಟರು ಎನ್ನುವಾಗ ಫಿನಿಕ್ಸ್ನಂತೆ ಎದ್ದು ನಿಂತ ಅಲ್ಕರಾಜ್ ಸತತ ಅಂಕಗಳ ಮೂಲಕ ಈ ಸೆಟನ್ನು ಟೈ ಬ್ರೇಕರ್ ಮೂಲಕ ಗೆದ್ದರು.
ಅಂತಿಮ ಹಾಗೂ ನಿರ್ಣಾಯಕ ಸೆಟ್ನಲ್ಲಿಯೂ ಅಮೋಘ ಆಟವಾಡಿದ ಅಲ್ಕರಾಜ್ ಈ ಸೆಟ್ನಲ್ಲಿಯೂ ಮೇಲುಗೈ ಸಾಧಿಸಿ ಪಂದ್ಯವನ್ನು ಗೆದ್ದು ಬೀಗಿದರು. ಸೋಲಿನ ಭೀತಿಯಲ್ಲಿದ್ದ ಅವರು ಸತತ ಮೂರು ಸೆಟ್ ಗೆದ್ದು ಚಾಂಪಿಯನ್ ಪಟ್ಟ ಉಳಿಸಿಕೊಂಡರು. ಒಂದು ವೇಳೆ ಸಿನ್ನರ್ ಗೆಲುವು ಸಾಧಿಸುತ್ತಿದ್ದರೆ, ಮೊದಲ ಫ್ರೆಂಚ್ ಓಪನ್ ಗೆದ್ದ ಸಾಧನೆ ಮಾಡುತ್ತಿದ್ದರು. ಆರಂಭಿಕ ಎರಡು ಸೆಟ್ನಲ್ಲಿ ಗೆಲುವು ಸಾಧಿಸಿದರೂ ಆ ಬಳಿಕದ ಸೆಟ್ನಲ್ಲಿ ಇದೇ ಲಯ ಮುಂದುವರಿಸುವಲ್ಲಿ ಎಡವಿದ ಅವರು ಆಘಾತಕಾರಿ ಸೋಲು ಕಂಡರು. ಉಭಯ ಆಟಗಾರರ ಈ ಹೋರಾಟ ಸುಮಾರು 6 ಗಂಟೆಗಳ ವರೆಗೆ ಸಾಗಿತು.
ಸೆಮಿಫೈನಲ್ನಲ್ಲಿ ಸಿನ್ನರ್ ಆರನೇ ಶ್ರೇಯಾಂಕದ ಜೊಕೊವಿಚ್ ಅವರನ್ನು ಹಿಮ್ಮೆಟ್ಟಿಸಿದ್ದರು. ಮತ್ತೊಂದು ಸೆಮಿಯಲ್ಲಿ ಅಲ್ಕರಾಜ್ ಎಂಟನೇ ಶ್ರೇಯಾಂಕದ ಲೊರೆಂಜೊ ಮುಸೆಟ್ಟಿ ಗಾಯಾಳಾಗಿ ಅರ್ಧದಲ್ಲೇ ಹಿಂದೆಸರಿದ ಕಾರಣ ಫೈನಲ್ಗೆ ಲಗ್ಗೆಯಿಟ್ಟಿದ್ದರು.