ಮಂಗಳೂರು: ಮಂಗಳೂರು-ಬೆಂಗಳೂರು ನಡುವೆ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಯಾಣಿಸುವ ಬಹುನಿರೀಕ್ಷಿತ ಹೈಸ್ಪೀಡ್ ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆ (Bengaluru–Mangaluru High-Speed Corridor) ಕಾರ್ಯಗತವಾಗುವ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಹೆದ್ದಾರಿ ಸಚಿವಾಲಯದಿಂದ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಮಂಗಳೂರು-ಬೆಂಗಳೂರು ಹೈಸ್ಪೀಡ್ ಕಾರಿಡಾರ್ ಯೋಜನೆ ಬಗ್ಗೆ ಮಾಹಿತಿ ನೀಡಿರುವ ಅವರು, ಮಂಗಳೂರು-ಬೆಂಗಳೂರು ನಡುವೆ ಅತ್ಯಂತ ವೇಗದ ಕಾರಿಡಾರ್ ರಸ್ತೆ ನಿರ್ಮಾಣದ ಕುರಿತಂತೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ ಪತ್ರ ಬಂದಿದ್ದು, ಈ ಯೋಜನೆಯ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕೆ ಕಳೆದ ಏ.30ರಂದು ಗುತ್ತಿಗೆ ನೀಡಲಾಗಿದ್ದು, ಈ DPR ಸಿದ್ಧಪಡಿಸಲು ಸರಿಸುಮಾರು 18 ತಿಂಗಳು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಹೀಗಿರುವಾಗ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಈ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಮಹತ್ವದ ಹೆಜ್ಜೆಯಿರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದ್ದಾರೆ.
Thank You @nitin_gadkari ji for this response to our request for support for key road infrastructure upgradation efforts to improve connectivity between Mangaluru-Bengaluru.
Gives me great contentment to know that the DPR for the construction of a high-speed corridor has been… pic.twitter.com/JIPmn6Rhep
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) June 10, 2025
ಈ ಹೈಸ್ಪೀಡ್ ಎಕ್ಸ್ಪ್ರೆಸ್ ಹೆದ್ದಾರಿಯು ನಾಲ್ಕರಿಂದ ಎಂಟು ಪಥಗಳನ್ನು ಹೊಂದುವ ನಿರೀಕ್ಷೆಯಿದ್ದು, ಹಾಸನದ ಮೂಲಕ ಹಾದು ಹೋಗಲಿದೆ. ಈ ಹೆದ್ದಾರಿ ಪಥ ನಿರ್ಮಾಣವಾದರೆ ಎರಡು ಮಹಾನಗರಗಳ ನಡುವಿನ ಸಾರಿಗೆ ಮೂಲಸೌಕರ್ಯ ಮತ್ತಷ್ಟು ಮೇಲ್ದರ್ಜೆಗೇರಲಿದೆ. ಸುಧಾರಿತ ಮಾರ್ಗದಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಜತೆಗೆ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣದ ಸಮಯ ಬಹಳ ಕಡಿಮೆ ಮಾಡುತ್ತದೆ ಮತ್ತು ಕರ್ನಾಟಕದ ಪ್ರಮುಖ ನಗರಗಳ ನಡುವೆ ಸುರಕ್ಷಿತ, ಹೆಚ್ಚು ಪರಿಣಾಮಕಾರಿ ಹಾಗೂ ಮಳೆಗಾಲ ಸೇರಿದಂತೆ ಸರ್ವ ಋತುವಿಗೂ ಅಬಾಧಿತವಾಗಿರುವ ಸಂಪರ್ಕ ವ್ಯವಸ್ಥೆ ಒದಗಿಸುತ್ತದೆ. ಈ ಯೋಜನೆಯಿಂದ ಮಂಗಳೂರು ಮಾತ್ರವಲ್ಲದೇ ದಕ್ಷಿಣ ಕರ್ನಾಟಕಕ್ಕೆ ಹಾಗೂ ಸುತ್ತಮುತ್ತದ ನಗರಗಳ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಮಂಗಳೂರು ಬಂದರು ಹಾಗೂ ಪ್ರವಾಸೋದ್ಯಮ, ವ್ಯಾಪಾರ – ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಗೂ ಇನ್ನಷ್ಟು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರು-ಬೆಂಗಳೂರು ಹೈ ಸ್ಪೀಡ್ ಕಾರಿಡಾರ್ ಯೋಜನೆ ಜಾರಿ ಸಂಬಂಧ ಕಳೆದೊಂದು ವರ್ಷದಿಂದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಿರಂತರವಾಗಿ ಶ್ರಮ ವಹಿಸುತ್ತಿದ್ದು, ಹಲವು ಬಾರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಹಿತ ಹಲವು ಅಧಿಕಾರಿಗಳು, ಸಚಿವರನ್ನು ಭೇಟಿ ಮಾಡಿದ್ದರು. ಆ ಮೂಲಕ ಈ ಯೋಜನೆ ಕಾರ್ಯಗತಗೊಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಹಾಗೂ ಫಾಲೋಅಪ್ ಮಾಡುತ್ತಿದ್ದಾರೆ.
ಒಟ್ಟಾರೆ ಕರ್ನಾಟಕದ ಈ ಪ್ರಮುಖ ಎಕ್ಸ್ಪ್ರೆಸ್ವೇ ವಾಸ್ತವವಾದರೆ, ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣದ ಸಮಯವು ಪ್ರಸ್ತುತ ಇರುವ 7-8 ಗಂಟೆಗಳಿಂದ ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಅಲ್ಲದೆ, ಈ ಯೋಜನೆಯ ಎಲ್ಲ ಹಂತದ ಪ್ರಕ್ರಿಯೆಗಳು ನಿರೀಕ್ಷೆಯಂತೆ ಪೂರ್ಣಗೊಂಡರೆ ಎಕ್ಸ್ಪ್ರೆಸ್ವೇ ನಿರ್ಮಾಣ ಕಾಮಗಾರಿಯು ಶೀಘ್ರ ಪ್ರಾರಂಭವಾಗುವ ಸಾಧ್ಯತೆಯಿದೆ.
ಈ ಸುದ್ದಿಯನ್ನೂ ಓದಿ | Pralhad Joshi: ಶೀಘ್ರದಲ್ಲೇ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗಲಿದೆ: ಪ್ರಲ್ಹಾದ್ ಜೋಶಿ
ಶಿರಾಡಿ ಘಾಟಿಯಲ್ಲಿ ಹೆದ್ದಾರಿ ಹಾಗೂ ರೈಲು ಮಾರ್ಗಕ್ಕೆ ಸಂಯೋಜಿತ ಡಿಪಿಆರ್ಗೆ ಸಲಹೆ: ಕ್ಯಾ. ಬ್ರಿಜೇಶ್ ಚೌಟ
ಶಿರಾಡಿ ಘಾಟಿಯಲ್ಲಿ ಪ್ರತ್ಯೇಕ ರೈಲು ಮಾರ್ಗ ನಿರ್ಮಿಸಲು ರೈಲ್ವೆ ಇಲಾಖೆ ಕೂಡಾ ಡಿಪಿಆರ್ ಸಿದ್ದಪಡಿಸಲು ಮುಂದಾಗಿದೆ. ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವ ಶಿರಾಡಿ ಘಾಟ್ ಸೂಕ್ಷ್ಮ ಪರಿಸರ ವಲಯದಲ್ಲಿರುವುದರಿಂದ ಇಲ್ಲಿ ರಸ್ತೆ ಮತ್ತು ರೈಲು ಮಾರ್ಗವನ್ನು ಸಮಾನಾಂತರವಾಗಿ ಅಭಿವೃದ್ದಿಸುವ ಸಾಧ್ಯತೆಗಳ ಬಗ್ಗೆ ಅನ್ವೇಷಿಸಲು ರೈಲ್ವೆ ಮಂಡಳಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದ ಜಂಟಿ ಸಮಿತಿಯೊಂದನ್ನು ರಚಿಸುವಂತೆ ಮನವಿ ಮಾಡಲಾಗಿದೆ. ಸಂಯೋಜಿತ ಯೋಜನೆ ರೂಪಿಸುವುದರಿಂದ ಅರಣ್ಯ ಮತ್ತು ಪರಿಸರ ಇಲಾಖೆಗಳ ಅನುಮೋದನೆ ಪಡೆಯುವುದು ಸುಲಭವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.