
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೇವಲ 1280 ರೂಪಾಯಿ ಸಾಲ ಕಟ್ಟಿಲ್ಲ ಎಂದು 7 ವರ್ಷದ ಹೆಣ್ಣು ಮಗುವನ್ನ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕರೆದೊಯ್ದಿರುವ ಆರೋಪ ಕೇಳಿಬಂದಿದೆ.ಏನಿದು ಪ್ರಕರಣ? ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಜಾಲಹಳ್ಳಿ ಗ್ರಾಮದ ನವೀನ್ ಹಾಗೂ ಪ್ರಮೀಳಾ ಜೀವನ ನಡೆಸಲು ಬಜಾಜ್ ಮೈಕ್ರೋ ಫೈನಾನ್ಸ್ನಿಂದ 30 ಸಾವಿರ ರೂಪಾಯಿ ಸಾಲ ಮಾಡಿದ್ದರು. 30 ಸಾವಿರ ಸಾಲ ಪಡೆದಿದ್ದ ದಂಪತಿ, 13 ತಿಂಗಳು ಲೋನ್ ಕಟ್ಟಿದ್ದರು. ಈ ತಿಂಗಳು 4 ದಿನ ತಡವಾಗಿದ್ದಕ್ಕೆ ಮೈಕ್ರೋ ಫೈನಾನ್ಸ್ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ. ಮೊದಲಿಗೆ ಮನೆಗೆ ಬಂದಿದ್ದ ಫೈನಾನ್ಸ್ ಸಿಬ್ಬಂದಿ ನವೀನ್ ತಾಯಿಗೆ ಬಾಯಿಗೆ ಬಂದು ಬೈದು ಹೋಗಿದ್ದಾರೆ ಎನ್ನಲಾಗಿದೆ.ಬಳಿಕ ಪಕ್ಕದ ಊರಿನಲ್ಲಿದ್ದ ಮಗುವಿನ ಬಳಿ ತೆರಳಿ ನಿಮ್ಮ ಅಮ್ಮ ಎಲ್ಲಿ ತೋರಿಸು ಬಾ ಎಂದು

ಕರೆದೊಯ್ದಿದ್ದಾರೆ. ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿದ ರೀತಿಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮಗಳ ಕರೆದುಕೊಂಡು ಹೋದ ವಿಷಯ ತಿಳಿದು, ದಂಪತಿ ಫೈನಾನ್ಸ್ ಸಿಬ್ಬಂದಿಗೆ ಕಚೇರಿಗೆ ಆಘಾತದಲ್ಲಿ ಓಡಿ ಬಂದಿದ್ದಾರೆ. ಆಗ, ‘ತಾಳಿ ಅಡವಿಟ್ಟು ದುಡ್ಡು ಕೊಡ್ತೀವಿ, ಸಂಜೆ ಬನ್ನಿ’ ಎಂದು ಬೇಡಿಕೊಂಡಿದ್ದಾರೆ. ಅದಕ್ಕೆ ಒಪ್ಪದ ಸಿಬ್ಬಂದಿ ‘ಈಗಲೇ ದುಡ್ಡು ನೀಡಿ’ ಅಂತಾ ಚಿತ್ರ ಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ಹಣವನ್ನು ನೀಡಿ, ಹೆಣ್ಣು ಮಗುವನ್ನು ಬಿಡಿಸಿಕೊಂಡು ಬಂದಿದ್ದಾರೆ. ಈ ಪ್ರಕರಣವು ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ ವೇಳೆ ಘಟನೆ ಬೆಳಕಿಗೆ ಬಂದಿದೆ