ಲೀಡ್ಸ್: ಕೆಎಲ್ ರಾಹುಲ್ (137) ಹಾಗೂ ರಿಷಭ್ ಪಂತ್ (118) ಅವರ ಶತಕಗಳ ಬಲದಿಂದ ಭಾರತ ತಂಡ, ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ (IND vs ENG) ಎದುರಾಳಿ ಇಂಗ್ಲೆಂಡ್ ತಂಡಕ್ಕೆ 371 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ. ಆ ಮೂಲಕ ಪಂದ್ಯದ ಐದನೇ ದಿನವಾದ ಮಂಗಳವಾರ ಪ್ರವಾಸಿ ತಂಡ ಗೆಲುವಿನ ವಿಶ್ವಾಸವನ್ನು ಹೊಂದಿದೆ. ಭಾರತ ತಂಡ (India) ದ್ವಿತೀಯ ಇನಿಂಗ್ಸ್ನಲ್ಲಿ 364 ರನ್ಗಳಿಗೆ ಆಲ್ಔಟ್ ಆಯಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡ (England), ನಾಲ್ಕನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನಿಂಗ್ಸ್ನಲ್ಲಿ 6 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ. ಕ್ರೀಸ್ನಲ್ಲಿ ಝ್ಯಾಕ್ ಕ್ರಾವ್ಲಿ (12*) ಹಾಗೂ ಬೆನ್ ಡಕೆಟ್ (9*) ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡಕ್ಕೆ ಕೊನೆಯ ದಿನವಾದ ಮಂಗಳವಾರ ಗೆಲ್ಲಲು 350 ರನ್ಗಳ ಅಗತ್ಯವಿದೆ.
ಐದನೇ ಹಾಗೂ ಪಂದ್ಯದ ಕೊನೆಯ ದಿನವಾದ ಮಂಗಳವಾರ ಭಾರತ ತಂಡ, ಎದುರಾಳಿಯ 10 ವಿಕೆಟ್ಗಳನ್ನು ಪಡೆಯಬೇಕಾಗಿದೆ. ಆದರ, ಪ್ರಥಮ ಇನಿಂಗ್ಸ್ನಲ್ಲಿ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಿತ್ತಿದ್ದರು. ಅವರು ಅದೇ ಲಯವನ್ನು ಕೊನೆಯ ದಿನ ಮುಂದುವರಿಸಿದರೆ ಟೀಮ್ ಇಂಡಿಯಾಗೆ ಗೆಲ್ಲಲು ಅವಕಾಶ ಸಿಗಲಿದೆ. ಆದರೆ, ಇನ್ನುಳಿದ ಬೌಲರ್ಗಳು ಕೂಡ ಬುಮ್ರಾಗೆ ಸೂಕ್ತ ರೀತಿಯಲ್ಲಿ ಸಾಥ್ ನೀಡಬೇಕಾಗುತ್ತದೆ.
IND vs ENG: ಲೀಡ್ಸ್ ಟೆಸ್ಟ್ ಎರಡೂ ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿ ಇತಿಹಾಸ ಬರೆದ ರಿಷಭ್ ಪಂತ್!
ಪಂತ್-ರಾಹುಲ್ ಜುಗಲ್ಬಂದಿ
ಇದಕ್ಕೂ ಮುನ್ನ ಸೋಮವಾರ ಎರಡು ವಿಕೆಟ್ ಕಳೆದುಕೊಂಡು 90 ರನ್ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡದ ಪರ ಕೆಎಲ್ ರಾಹುಲ್ ಹಾಗೂ ನಾಯಕ ಶುಭಮನ್ ಗಿಲ್ ಕ್ರೀಸ್ಗೆ ಬಂದಿದ್ದರು. ಆದರೆ, ಪ್ರಥಮ ಇನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಶುಭಮನ್ ಗಿಲ್ ಈ ಇನಿಂಗ್ಸ್ನಲ್ಲಿ ಕೇವಲ 8 ರನ್ ಗಳಿಸಿ ಬೌಲ್ಡ್ ಆದರು. ಈ ವೇಳೆ ನಾಲ್ಕನೇ ವಿಕೆಟ್ಗೆ ಜೊತೆಯಾದ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅದ್ಭುತ ಜೊತೆಯಾಟವನ್ನು ಆಡಿದರು. ಈ ಜೋಡಿ ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿತು ಹಾಗೂ ನಾಲ್ಕನೇ ವಿಕೆಟ್ಗೆ 195 ರನ್ಗಳ ದೊಡ್ಡ ಜೊತೆಯಾಟವನ್ನು ಆಡಿತು. ಆ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸುಲು ನೆರವು ಈ ಇಬ್ಬರೂ ನೆರವು ನೀಡಿದರು.
IND vs ENG: 9ನೇ ಟೆಸ್ಟ್ ಶತಕ ಬಾರಿಸಿ ಭಾರತಕ್ಕೆ ಆಸರೆಯಾದ ಕೆಎಲ್ ರಾಹುಲ್!
ಕೆಎಲ್ ರಾಹುಲ್ ನಿರ್ಣಾಯಕ ಶತಕ
ಪ್ರಥಮ ಇನಿಂಗ್ಸ್ನಲ್ಲಿ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದ ಕೆಎಲ್ ರಾಹುಲ್, ದ್ವಿತೀಯ ಇನಿಂಗ್ಸ್ನಲ್ಲಿ ಪ್ರಬುದ್ಧ ಇನಿಂಗ್ಸ್ ಆಡಿದರು. ಕಳೆದ ಇನಿಂಗ್ಸ್ನಲ್ಲಿ ಮಾಡಿದ್ದ ತಪ್ಪನ್ನು ತಿದ್ದಿಕೊಂಡ ಕನ್ನಡಿಗ ರಾಹುಲ್, ದ್ವಿತೀಯ ಇನಿಂಗ್ಸ್ನಲ್ಲಿ ದೀರ್ಘಾವಧಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ರಾಹುಲ್, ಆಡಿದ 247 ಎಸೆತಗಳಲ್ಲಿ 18 ಮನಮೋಹಕ ಬೌಂಡರಿಗಳೊಂದಿಗೆ 137 ರನ್ಗಳನ್ನು ದಾಖಲಿಸಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದ 9ನೇ ಶತಕವನ್ನು ಸಿಡಿಸಿದರು ಹಾಗೂ ಇಂಗ್ಲೆಂಡ್ ನೆಲದಲ್ಲಿ ಮೂರನೇ ಶತಕವನ್ನು ಬಾರಿಸಿದರು.
ದಾಖಲೆಯ ಶತಕ ಬಾರಿಸಿದ ರಿಷಭ್ ಪಂತ್
ಇನ್ನು ಪ್ರಥಮ ಇನಿಂಗ್ಸ್ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ರಿಷಭ್ ಪಂತ್, ದ್ವಿತೀಯ ಇನಿಂಗ್ಸ್ನಲ್ಲಿಯೂ ಶತಕವನ್ನು ಬಾರಿಸಿದರು. ಕೆಎಲ್ ರಾಹುಲ್ ಅವರ ಜೊತೆಗೆ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ್ದ ರಿಷಭ್ ಪಂತ್, ಇಂಗ್ಲೆಂಡ್ ಬೌಲರ್ಗಳನ್ನು ದಂಡಿಸಿದರು. ಅವರು ಆಡಿದ 140 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 118 ರನ್ಗಳನ್ನು ಗಳಿಸಿದರು. ಆ ಮೂಲಕ ತಮ್ಮ ಟಸ್ಟ್ ವೃತ್ತಿ ಜೀವನದ 8ನೇ ಶತಕ ಹಾಗೂ ಇಂಗ್ಲೆಂಡ್ನಲ್ಲಿ ನಾಲ್ಕನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಅಲ್ಲದೆ, ಇಂಗ್ಲೆಂಡ್ನಲ್ಲಿ ಟೆಸ್ಟ್ನ ಎರಡು ಇನಿಂಗ್ಸ್ಗಳಲ್ಲಿ ಶತಕ ಬಾರಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಭಾಜನರಾದರು.
8⃣ 💯 ! 🙌
1⃣st Indian to score hundreds in both innings of a Test in England 🔝
7⃣th Indian to score hundreds in both innings of a Test! 👏
Incredible batting display in the series opener from the #TeamIndia vice-captain! 👍 👍… pic.twitter.com/RzNA9lfFQr
— BCCI (@BCCI) June 23, 2025
ಮತ್ತೊಮ್ಮೆ ಕರುಣ್ ನಾಯರ್ ವಿಫಲ
8 ವರ್ಷಗಳ ಬಳಿಕ ಟೆಸ್ಟ್ಗೆ ಕಮ್ಬ್ಯಾಕ್ ಪಂದ್ಯವನ್ನು ಆಡುತ್ತಿರುವ ಕನ್ನಡಿಗ ಕರುಣ್ ನಾಯರ್ ಪ್ರಥಮ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಆದರೆ, ನಾಲ್ಕನೇ ದಿನವಾದ ಸೋಮವಾರ ದ್ವಿತೀಯ ಇನಿಂಗ್ಸ್ನಲ್ಲಿಯೂ 20 ರನ್ ಗಳಿಸಿ ಕ್ರೀಸ್ ವೋಕ್ಸ್ಗೆ ಶರಣಾದರು. ರವೀಂದ್ರ ಜಡೇಜಾ 25 ರನ್ ಗಳಿಸಿ ಅಜೇಯರಾಗಿ ಉಳಿದರು. ಮತ್ತೊಂದು ತುದಿಯಲ್ಲಿಇವರಿಗೆ ಯಾರೂ ಸಾಥ್ ನೀಡಲಿಲ್ಲ. ಶಾರ್ದುಲ್ ಠಾಕೂರ್ ಮತ್ತೊಮ್ಮೆ ವಿಫಲರಾದರು. ಅಂತಿಮವಾಗಿ ಭಾರತ ತಂಡ ದ್ವಿತೀಯ ಇನಿಂಗ್ಸ್ನಲ್ಲಿ 96 ಓವರ್ಗಳಿಗೆ 364 ರನ್ಗಳಿಗೆ ಆಲ್ಔಟ್ ಆಯಿತು. ಆ ಮೂಲಕ ಇಂಗ್ಲೆಂಡ್ಗೆ 371 ರನ್ಗಳ ಗುರಿಯನ್ನು ನೀಡಿತು.
ಇಂಗ್ಲೆಂಡ್ ಪರ ಬ್ರೈಡನ್ ಕಾರ್ಸ್ ಹಾಗೂ ಜಾಶ್ ಟಾಂಗ್ ತಲಾ ಮೂರು ವಿಕೆಟ್ಗಳನ್ನು ಕಬಳಿಸಿದರು.