ತಿರುವನಂತಪುರಂ: ಸಾವು ಯಾವ ರೂಪದಲ್ಲಿ ಯಾವಾಗ ಬಂದೆರಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಎನ್ನುವಂತಿದೆ ಈ ಆಘಾತಕಾರಿ ಘಟನೆ. ಮನೆಯ ಗೋಡೆಗೆ ಹೊಡೆದಿದ್ದ ಮೊಳೆಯೇ 11 ವರ್ಷದ ಬಾಲಕನ ಸಾವಿಗೆ ಕಾರಣವಾದ ಹೃದಯ ವಿದ್ರಾವಕ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ. ವಲ್ಲಿಕ್ಕಂಜಿರಾಮ್ನಲ್ಲಿ ಶುಕ್ರವಾರ (ಜೂ. 20) ಈ ದುರಂತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲಗುವ ಕೋಣೆಯ ಗೋಡೆಗೆ ಹೊಡೆದಿದ್ದ ಮೊಳೆಗೆ ಬಾಲಕನ ಶರ್ಟ್ ಲಾಕರ್ ಸಿಲುಕಿಕೊಂಡು ಆತ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ಮಣಿಕಂಠನ್-ದಿವ್ಯಾ ದಂಪತಿಯ ಪುತ್ರ ಧ್ವನಿತ್ ಎಂದು ಗುರುತಿಸಲಾಗಿದೆ. ಈತ ನಿರಮರತ್ತೂರ್ ಸರ್ಕಾರಿ ಶಾಲೆಯ 6ನೇ ತರಗತಿಯಲ್ಲಿ ಓದುತ್ತಿದ್ದ. ಮನೆಯಲ್ಲಿ ಧ್ವನಿತ್ ಒಬ್ಬನೇ ಇದ್ದಾಗ ಈ ಅವಘಡ ಸಂಭವಿಸಿದೆ.
ಘಟನೆಯ ವಿವರ
ಆಟವಾಡುತ್ತಿದ್ದಾಗ ಧ್ವನಿತ್ ಧರಿಸಿದ್ದ ಶರ್ಟ್ನ ಕಾಲರ್ ಮೊಳಗೆ ಚುಚ್ಚಿಕೊಂಡಿತ್ತು. ಇದರಿಂದ ಕುತ್ತಿಗೆ ಬಿಗಿಯಾಗಿ ಉಸಿರಾಡಲು ಸಾಧ್ಯವಾಗದೆ ಅತ ಅಸುನೀಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೊಳೆಗೆ ಶರ್ಟ್ ಸಿಲುಕಿ ಅದರಿಂದ ಬಿಡಿಸಲು ಸಾಧ್ಯವಾಗದೆ ಧ್ವನಿತ್ ಜೋರಾಗಿ ಕಿರುಚಿಕೊಂಡಿದ್ದ. ಆತನ ಕೂಗು ಕೇಳಿ ಮಣಿಕಂಠನ್ ಕೋಣೆಯೊಳಗೆ ಧಾವಿಸಿದ್ದರು. ಈ ವೇಳೆ ಆತ ಬಿಡಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿರುವುದು ಕಂಡುಬಂತು. ಕೂಡಲೇ ಆತನನ್ನು ತಿರೂರ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು.
ತೀವ್ರ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಶನಿವಾರ (ಜೂ. 21) ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಧ್ವನಿತ್ ಮೃತಪಟ್ಟಿದ್ದಾನೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಮೃತದೇಹಕ್ಕೆ ತಿರೂರಿನ ಪೊಟ್ಟಿಲಥರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಸುದ್ದಿಯನ್ನೂ ಓದಿ: Electric Shock: ಮನೆ ಮುಂದೆ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು
ಟ್ರಾಫಿಕ್ ಪೊಲೀಸರ ಎಡವಟ್ಟಿಗೆ 3 ವರ್ಷದ ಬಾಲಕಿ ಸಾವು
ಮಂಡ್ಯ: ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ ಮೂರೂವರೆ ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ಇತ್ತೀಚೆಗೆ ಮಂಡ್ಯದ ಸ್ವರ್ಣಸಂದ್ರ ಬಳಿ ನಡೆದಿತ್ತು. ಮೃತ ಬಾಲಕಿಯನ್ನು ಮದ್ದೂರು ತಾಲೂಕಿನ ಗೊರವನಹಳ್ಳಿಯ ವಾಣಿ ಮತ್ತು ಅಶೋಕ್ ದಂಪತಿಯ ಪುತ್ರಿ ಹೃತೀಕ್ಷಾ ಎಂದು ಗುರುತಿಸಲಾಗಿದೆ. ಬಾಲಕಿಗೆ ನಾಯಿ ಕಚ್ಚಿದ್ದರಿಂದ ಆಸ್ಪತ್ರೆಗೆ ದಂಪತಿ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ಹೆಲ್ಮೆಟ್ ತಪಾಸಣೆಗೆ ತಡೆದಿದ್ದರು. ಇದರಿಂದ ಬೈಕ್ ಆಯ ತಪ್ಪಿ ಬಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು.
ರಸ್ತೆಯಲ್ಲೇ ಮಗುವನ್ನು ಮಡಿನಲ್ಲಿಟ್ಟುಕೊಂಡು ತಂದೆ-ತಾಯಿ ಗೋಳಾಡಿದ್ದರು. ಅಲ್ಲದೆ ಸಾರ್ವಜನಿಕರು, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಘಟನೆಯ ವರದಿ ಪಡೆದು, ಸ್ಥಳದಲ್ಲಿದ್ದ ಮೂವರು ಎಎಸ್ಐಗಳನ್ನು ಸಸ್ಪೆಂಡ್ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದರು. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಸಕ್ಕೆ ಕಾರಣವಾಗಿತ್ತು.