ಬೀಜಿಂಗ್: ಚೀನಾದ ನೈಋತ್ಯ ಗುಯಿಝೌ (Guizhou) ಪ್ರಾಂತ್ಯದಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಇದರಿಂದ ಹೆದ್ದಾರಿ ಸೇತುವೆಯೊಂದು ಕುಸಿದಿದ್ದು ಅದರ ಮೇಲೆ ಸಾಗುತ್ತಿದ್ದ ಟ್ರಕ್ವೊಂದು ಬ್ಯಾಲೆನ್ಸ್ ತಪ್ಪಿ ಸೇತುವೆಯ ತುದಿಯಲ್ಲಿ ನೇತಾಡಿದೆ. ಅದರಲ್ಲಿ ಚಾಲಕ ಸಹ ಇದ್ದ. ಕೊನೆಗೆ ಟ್ರಕ್ ಒಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ರಕ್ಷಿಸಲಾಗಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಕ್ಸಿಯಾಮೆನ್-ಚೆಂಗ್ಡು ಎಕ್ಸ್ಪ್ರೆಸ್ವೇಯ ಹೌಜಿಹೆ ಸೇತುವೆಯ ಮೇಲೆ ಈ ಅಪಘಾತ ಸಂಭವಿಸಿದೆ. ಈ ವೇಳೆ ಟ್ರಕ್ ಮಾತ್ರ ಸೇತುವೆಯ ಮೇಲೆ ಸಾಗುತ್ತಿತ್ತು. ಟ್ರಕ್ ಒಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ನಂತರ ರಕ್ಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ವಿಡಿಯೊ ಇಲ್ಲಿದೆ ನೋಡಿ…
ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೆದ್ದಾರಿಯ ಕೆಳಗಿರುವ ಮಣ್ಣು ಮೃದುವಾಗಿ, ಭೂಕುಸಿತ ಸಂಭವಿಸಿತ್ತು. ಇದರಿಂದ ಈ ಸೇತುವೆಯೂ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಬ್ರ್ಯಾಂಡೆಡ್ ಬ್ಯಾಗ್ ಬಿಟ್ಟು ಈ ವಿದೇಶಿ ಬೆಡಗಿಯರು ಮಾಡಿದ್ದೇನು ನೋಡಿ; ವಿಡಿಯೊ ವೈರಲ್
ಭಾರಿ ಮಳೆಯಿಂದಾಗಿ ನದಿಯ ಬಳಿ ಬೀಡುಬಿಟ್ಟ ಸಮುದಾಯಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲು ತಿಳಿಸಲಾಗಿದೆ. 3,00,000ಕ್ಕೂ ಹೆಚ್ಚು ನಿವಾಸಿಗಳಿರುವ ಕಾಂಗ್ಜಿಯಾಂಗ್ ಮತ್ತು ರೊಂಗ್ಜಿಯಾಂಗ್ ನಗರಗಳಲ್ಲಿ ನದಿಗಳ ದಂಡೆಯಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಬೇರೆ ಕಡೆ ಹೋಗುವಂತೆ ಸ್ಥಳೀಯ ಅಧಿಕಾರಿಗಳು ತುರ್ತು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಹವಾಮಾನ ತಜ್ಞರು ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಗುಯಿಝೌನಂತಹ ಪ್ರವಾಹ ಪೀಡಿತ ಪ್ರಾಂತ್ಯಗಳು ಚಂಡಮಾರುತಗಳ ಅತಿಕ್ರಮಣದಿಂದ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದಾರೆ. ಚೀನಾದಲ್ಲಿ ಪ್ರವಾಹಗಳು ಸಾಮಾನ್ಯವಾಗಿದ್ದರೂ, ದುರ್ಘಟನೆಗಳು ಹೆಚ್ಚಾಗಿ ಸಂಭವಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.