ನವದೆಹಲಿ: ಭಾರತದ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ(IND vs ENG) ಗೆಲುವಿನ ಬಳಿಕ ಇಂಗ್ಲೆಂಡ್ ತಂಡ ಐದು ಪಂದ್ಯಗಳ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯ ಜುಲೈ 2 ರಂದು ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು (England Squad) ಜೂನ್ 28 ರಂದು ಇಸಿಬಿ ಪ್ರಕಟಿಸಿದ್ದು, ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಮಾರಕ ವೇಗಿ ಜೋಫ್ರಾ ಆರ್ಚರ್ (Jofra Archer) ಅವರು ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಜೋಫ್ರಾ ಆರ್ಚರ್ ಗಾಯಗೊಂಡಿದ್ದರು. ಇತ್ತೀಚೆಗೆ ಗಾಯದಿಂದ ಚೇತರಿಸಿಕೊಂಡಿದ್ದ ಅವರು ಕೌಂಟಿಗೆ ಮರಳಿದ್ದರು ಮತ್ತು ಈಗ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ.
ಜೋಫ್ರಾ ಆರ್ಚರ್ 2021ರ ಫೆಬ್ರವರಿ ಬಳಿಕೆ ಇದೇ ಮೊದಲ ಬಾರಿ ಟೆಸ್ಟ್ ಕ್ರಿಕೆಟ್ಗೆ ಮರಳುತ್ತಿದ್ದಾರೆ. ಜುಲೈ 2 ರಂದು ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ ಪ್ರಾರಂಭವಾಗುವ ಎರಡನೇ ಪಂದ್ಯದಲ್ಲಿ ಅವರು ಇಂಗ್ಲೆಂಡ್ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್ಚರ್ ಇತ್ತೀಚೆಗೆ ಡರ್ಹ್ಯಾಮ್ ವಿರುದ್ಧದ ಕೌಂಟಿ ಚಾಂಪಿಯನ್ಶಿಪ್ನ ಕೊನೆಯ ಸುತ್ತಿನಲ್ಲಿ ಸಸೆಕ್ಸ್ ತಂಡದ ಪರ ಆಡಿದ್ದರು. ಇಂಗ್ಲೆಂಡ್ ಪರ ಅವರು ಕೊನೆಯ ಟೆಸ್ಟ್ ಪಂದ್ಯವನ್ನು 2021ರಲ್ಲಿ ಭಾರತದ ವಿರುದ್ಧ ಆಡಿದ್ದರು. ಇದಾದ ನಂತರ ಅವರು ಬೆನ್ನಿನ ಒತ್ತಡದ ಮುರಿತ ಸೇರಿದಂತೆ ಹಲವಾರು ಗಾಯಗಳ ಸಮಸ್ಯೆಯನ್ನು ಎದುರಿಸಿದ್ದರು.
IND vs ENG: ರಿಷಭ್ ಪಂತ್ ತನ್ನ ಶತಕಗಳನ್ನು ದ್ವಿಶತಕಗಳನ್ನಾಗಿ ಪರಿವರ್ತಿಸಬೇಕೆಂದ ಆರ್ ಅಶ್ವಿನ್!
ಗಾಯಗಳ ಸಮಸ್ಯೆಯಿಂದ ಜೋಫ್ರಾ ಆರ್ಚರ್ 2024ರ ಮಧ್ಯದವರೆಗೂ ದೂರ ಉಳಿದಿದ್ದರು. ನಂತರ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ವೈಟ್-ಬಾಲ್ ಕ್ರಿಕೆಟ್ಗೆ ಮರಳಿದ್ದರು. ಇದೀಗ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಆರ್ಚರ್ ಮರಳಿದ್ದಾರೆ. ಇನ್ನುಳಿಂದಂತೆ ಲೀಡ್ಸ್ನ ಹೆಡಿಂಗ್ಲೆಯಲ್ಲಿ ಮೊದಲನೇ ಟೆಸ್ಟ್ ಪಂದ್ಯವನ್ನು ಆಡಿದ್ದ ಅದೇ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಉಭಯ ತಂಡಗಳ ನಡುವಣ ಕೊನೆಯ ಮೂರು ಟೆಸ್ಟ್ ಪಂದ್ಯಗಳು ಲಂಡನ್ನ ಲಾರ್ಡ್ಸ್ (ಜುಲೈ 10 ರಿಂದ 14), ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ (ಜುಲೈ 23-27) ಮತ್ತು ದಿ ಓವಲ್ (ಜುಲೈ 31 – ಆಗಸ್ಟ್ 4) ಕ್ರೀಡಾಂಗಣದಲ್ಲಿ ನಡೆಯಲಿವೆ.
Jofra Archer is 🔥
Our squad to take on India in the second Test has just dropped 📋👇
— England Cricket (@englandcricket) June 26, 2025
ಎರಡನೇ ಟೆಸ್ಟ್ಗೆ ಇಂಗ್ಲೆಂಡ್ ತಂಡ
ಬೆನ್ ಸ್ಟೋಕ್ಸ್ (ನಾಯಕ), ಜೋಫ್ರಾ ಆರ್ಚರ್, ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಸ್ಯಾಮ್ ಕುಕ್, ಜ್ಯಾಕ್ ಕ್ರಾವ್ಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲ್ಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್, ಜಾಶ್ ಟಾಂಗ್, ಕ್ರಿಸ್ ವೋಕ್ಸ್