ಬೆಂಗಳೂರು: ಮಂಸೋರೆ ನಿರ್ದೇಶಿಸಿರುವ ʼದೂರ ತೀರ ಯಾನʼ ಚಿತ್ರವು (Doora Theera Yaana Movie) ಜುಲೈ 11ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಎರಡು ಹಾಡುಗಳು ಜನರ ಮನ್ನಣೆ ಗಳಿಸುತ್ತಿವೆ. ಸಿನಿಮಾ ಆರಂಭದಿಂದ ಇಲ್ಲಿಯವರೆಗೂ ನಾಯಕಿ ಮತ್ತು ನಾಯಕನ ಪಾತ್ರಗಳನ್ನು ಹೊರತುಪಡಿಸಿ ಉಳಿದ ತಾರಾಗಣದ ಪರಿಚಯ ಮಾಡಿಸದೇ ಬಂದಿದ್ದ ಚಿತ್ರತಂಡ ಈಗ ಉಳಿದ ಪಾತ್ರಗಳ ಪರಿಚಯ ಆರಂಭಿಸಿದೆ. ಅದರಲ್ಲಿ ಮೊದಲ ಪಾತ್ರ ಗೌರಿ. ಈ ಪಾತ್ರದಲ್ಲಿ ರಾಷ್ಟ್ರ ಪ್ರಶಸಿ ಪುರಸ್ಕೃತ ನಟಿ ಶ್ರುತಿ ಹರಿಹರನ್ ಕಾಣಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ ʼನಾತಿಚರಾಮಿʼ. ಮಂಸೋರೆ ನಿರ್ದೇಶನದ ಈ ಕನ್ನಡ ಸಿನಿಮಾ ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ಇದು ಕೇವಲ ಪ್ರಶಸ್ತಿಯ ಕಾರಣಕ್ಕಷ್ಟೇ ಅಲ್ಲದೇ ಈ ಸಿನಿಮಾದ ಕಥಾ ವಸ್ತುವೂ ಹೆಚ್ಚು ಚರ್ಚಿತವಾಗಿ, ನೆಟ್ಫ್ಲಿಕ್ಸ್ ಮೂಲಕ ದೇಶ- ವಿದೇಶದ ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾದಲ್ಲಿ ಗೌರಿ ಪಾತ್ರ ಮಾಡಿದ್ದ ಶ್ರುತಿ ಹರಿಹರನ್ ಮತ್ತೆ ಮಂಸೋರೆ ಅವರ ಹೊಸ ಸಿನಿಮಾ ʼದೂರ ತೀರ ಯಾನʼದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಪರಿಚಯದ ವಿಡಿಯೊವನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ʼನಾತಿಚರಾಮಿʼಯ ದಿಟ್ಟ ಮಹಿಳೆ ‘ಗೌರಿʼ ಕನ್ನಡ ಚಿತ್ರರಂಗದಲ್ಲೇ ಒಂದು ಐಕಾನಿಕ್ ಪಾತ್ರ. ಕನ್ನಡ ಸಿನಿಮಾಗಳಲ್ಲಿ ನಿರ್ದೇಶಕರು ತಮ್ಮದೇ ಸಿನಿಮಾದ ಪಾತ್ರಗಳನ್ನು ಮತ್ತೊಂದು ಸಿನಿಮಾದಲ್ಲಿ ತರುವುದರ ಮೂಲಕ ತಮ್ಮದೇ ಆದ ಸಿನಿ ಪ್ರಪಂಚವನ್ನು ಸೃಷ್ಟಿಸಿರುವುದು ಅಪರೂಪ. ಅಂತಹ ಅಪರೂಪದ ಜಗತ್ತನ್ನು ಮಂಸೋರೆ ತಮ್ಮ ʼದೂರ ತೀರ ಯಾನʼದಲ್ಲಿ ಸೃಷ್ಟಿರುವ ಪ್ರಯತ್ನವನ್ನು ಈ ವಿಡಿಯೊದಲ್ಲಿ ಕಾಣಬಹುದು. ಇಂತಹ ಅಚ್ಚರಿ ನೀಡಿರುವ ಮಂಸೋರೆ ಮತ್ತು ಗೌರಿ ಕಾಂಬಿನೇಶನ್ ತೆರೆಯ ಮೇಲೆ ಯಾವ ರೀತಿ ಮ್ಯಾಜಿಕ್ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಈ ಸುದ್ದಿಯನ್ನೂ ಓದಿ | Draping Saree: ಪ್ರಿ ಡ್ರೇಪಿಂಗ್ ಸೀರೆಯ ಕಮಾಲ್!
ʼದೂರ ತೀರ ಯಾನʼ ಸಿನಿಮಾ ಸೆನ್ಸಾರ್ ಪೂರ್ಣಗೊಳಿಸಿ ಯು/ಎ ಪ್ರಮಾಣ ಪತ್ರವನ್ನು ಪಡೆದಿದ್ದು ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಕಿಚ್ಚ ಸುದೀಪ್ ಜೂ.28 ರಂದು ಬೆಳಗ್ಗೆ 11 ಗಂಟೆಗೆ ಡಿಜಿಟಲ್ ಮೂಲಕ ಸಿನಿಮಾದ ಟ್ರೈಲರ್ ಅನಾವರಣಗೊಳಿಸಲಿದ್ದಾರೆ.