ಕೊಲಂಬೊ: ಶುಕ್ರವಾರ ಎರಡನೇ ಟೆಸ್ಟ್ ಪಂದ್ಯದ (BAN vs SL) ಮೂರನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ (Bangladesh) ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಆರು ವಿಕೆಟ್ಗಳ ನಷ್ಟಕ್ಕೆ 115 ರನ್ ಗಳಿಸಿದೆ. ಹಾಗಾಗಿ ಶ್ರೀಲಂಕಾ (Sri lanka) ತಂಡ ಇನಿಂಗ್ಸ್ ಗೆಲುವು ದಾಖಲಿಸಲು ಇನ್ನು ಕೇವಲ ನಾಲ್ಕು ವಿಕೆಟ್ಗಳ ಅಗತ್ಯವಿದೆ. ಶ್ರೀಲಂಕಾ ಪ್ರಥಮ ಇನಿಂಗ್ಸ್ನಲ್ಲಿ 458 ರನ್ ಗಳಿಸುವ ಮೂಲಕ 211 ರನ್ಗಳ ಮುನ್ನಡೆ ಸಾಧಿಸಿತ್ತು, ಆದರೆ ಬಾಂಗ್ಲಾದೇಶ ತಂಡ ಇನ್ನೂ 96 ರನ್ಗಳ ಹಿಂದಿದ್ದು, ಕೇವಲ ನಾಲ್ಕು ವಿಕೆಟ್ಗಳು ಮಾತ್ರ ಬಾಕಿ ಉಳಿದಿವೆ. ಬಾಂಗ್ಲಾದೇಶ ತಂಡ ತನ್ನ ಪ್ರಥಮ ಇನಿಂಗ್ಸ್ನಲ್ಲಿ 247 ರನ್ಗಳಿಗೆ ಆಲ್ಔಟ್ ಆಗಿತ್ತು. ಅಂದ ಹಾಗೆ ನಾಲ್ಕನೇ ದಿನವಾದ ಶನಿವಾರೆ ಶ್ರೀಲಂಕಾ ತಂಡ ಎರಡನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಅಂತರದಲ್ಲಿ ಗೆಲ್ಲುವ ಸಾಧ್ಯತೆ ಇದೆ.
ಬಾಂಗ್ಲಾದೇಶ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಅನಮುಲ್ ಹಕ್ (19), ಶಾದ್ಮನ್ ಇಸ್ಲಾಂ (12), ಮೊಮಿನುಲ್ ಹಕ್ (15), ನಾಯಕ ನಜ್ಮುಲ್ ಹುಸೇನ್ ಶಾಂತೊ (26), ಮುಷ್ಫಿಕರ್ ರಹೀಮ್ (26) ಮತ್ತು ಮೆಹಡಿ ಹಸನ್ ಮಿರಾಜ್ (11) ಅವರ ವಿಕೆಟ್ಗಳನ್ನು ಕಳೆದುಕೊಂಡಿತು. ಲಿಟನ್ ದಾಸ್ ಮೂರನೇ ದಿನದಾಟದ ಅಂತ್ಯಕ್ಕೆ 13 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಶ್ರೀಲಂಕಾ ತಂಡದ ನಾಯಕ ಧನಂಜಯ್ ಡಿ ಸಿಲ್ವಾ (13 ರನ್ಗಳಿಗೆ 2 ವಿಕೆಟ್ಗಳು) ಮತ್ತು ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ (47 ರನ್ಗಳಿಗೆ 2 ವಿಕೆಟ್ಗಳು) ತಲಾ ಎರಡು ವಿಕೆಟ್ಗಳನ್ನು ಕಬಳಿಸಿದ್ದಾರೆ.