ಬೆಂಗಳೂರು: ಆಟೋ ಮಾಫಿಯಾ ವಿರುದ್ಧ ಲಾಯರ್ ಜಗದೀಶ್ ಧ್ವನಿ ಎತ್ತಿದ್ದಾರೆ. ರಾಜಧಾನಿಯಲ್ಲಿ ಒಂದೇ ನಂಬರ್ ಪ್ಲೇಟ್ನ ಹಲವು ಆಟೋಗಳು ಅಕ್ರಮವಾಗಿ ಓಡಾಡುತ್ತಿದ್ದು, ಈ ಬಗ್ಗೆ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಮತ್ತು ಸಂಚಾರ ಜಂಟಿ ಪೊಲೀಸ್ ಆಯುಕ್ತರಿಗೆ ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮನವಿ ಪತ್ರ ಸಲ್ಲಿಸಿದ್ದಾರೆ. ಬೆಂಗಳೂರಲ್ಲಿ ಆಟೋ ರಾಜಾ ಬೇಕೇ ಹೊರತು ವಸೂಲಿ ರಾಜಾ ಬೇಡ. ಆಟೋಗಳ ದಾಖಲೆಗಳ ಪರಿಶೀಲನೆಗೆ ರಾಜ್ಯ ಸರ್ಕಾರವು ಅಧಿಕಾರಿಗಳ ಪ್ರತ್ಯೇಕ ತಂಡ ರಚನೆ ಮಾಡಬೇಕು. ಈ ಮೂಲಕ ಅನಧಿಕೃತ ಆಟೋಗಳ ನಟ್ಟು ಬೋಲ್ಟು ಟೈಟ್ ಮಾಡಬೇಕು ಎಂದು ಲಾಯರ್ ಜಗದೀಶ್ ಆಗ್ರಹಿಸಿದ್ದಾರೆ.
ಸಾರಿಗೆ ಆಯುಕ್ತರ ಕಚೇರಿಯ ಮಾಹಿತಿಯ ಪ್ರಕಾರ, ಬೆಂಗಳೂರು ನಗರದಲ್ಲಿ 1,67,062 ಆಟೋಗಳಿಗೆ ಪರವಾನಗಿ ನೀಡಲಾಗಿದೆ. ಆದರೆ, ನಕಲಿ ನಂಬರ್ ಪ್ಲೇಟ್ ಮತ್ತು ದಾಖಲೆಗಳೊಂದಿಗೆ ಅನಧಿಕೃತವಾಗಿ ಹಲವು ಆಟೋಗಳು ಓಡಾಡುತ್ತಿವೆ. ಉದಾಹರಣೆಗೆ, ಬೆಂಗಳೂರಿನಲ್ಲಿ 7 ಆಟೋಗಳು, ಒಂದೇ ನೋಂದಣಿ ಸಂಖ್ಯೆಯನ್ನು (KA-04 AA 2765) ಬಳಸುತ್ತಿರುವುದು ಕಂಡುಬಂದಿದೆ, ಅದು ನಕಲಿ ಸ್ವರೂಪದ್ದಾಗಿದೆ.
ನಮಗೆ ಸಿಕ್ಕ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 25 ಲಕ್ಷಕ್ಕೂ ಹೆಚ್ಚು ಅನಧಿಕೃತ ಆಟೋಗಳು ನಕಲಿ RTO ಸಂಖ್ಯೆ ಮತ್ತು ಪರವಾನಗಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿವೆ. ಆಟೋ ಮಾಫಿಯಾ ನಿಯಂತ್ರಿಸಲಾಗದ ಅಕ್ರಮ ಜಾಲವಾಗಿ ಮಾರ್ಪಟ್ಟಿವೆ. ಆಟೋ ಚಾಲಕರು ಸಮವಸ್ತ್ರ ಧರಿಸುವುದಿಲ್ಲ, ಪ್ರಯಾಣಿಕರು ಹೇಳಿದ ಸ್ಥಳಗಳಿಗೆ ಕರೆದೊಯ್ಯುವುದಿಲ್ಲ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಶೇಕಡಾ 95 ರಷ್ಟು ಆಟೋ ರಿಕ್ಷಾ ಚಾಲಕರು ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ದುಪಟ್ಟು ಪ್ರಯಾಣ ದರ ವಸೂಲಿ, ವಾಹನ ಪರವಾನಗಿ, ಎಫ್ಸಿ, ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಆಟೋ ಮಾಫಿಯಾ ಕಡಿವಾಣಕ್ಕೆ ಸಂಚಾರ ಮತ್ತು ಸಾರಿಗೆ ಇಲಾಖೆ ಜಂಟಿಯಾಗಿ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಈ ಸುದ್ದಿಯನ್ನೂ ಓದಿ | Auto-rickshaw fares: ಆಟೋ ಚಾಲಕರು ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡಿದ್ರೆ ಬೀಳುತ್ತೆ ಕೇಸ್; ರಾಜ್ಯ ಸರ್ಕಾರ ಎಚ್ಚರಿಕೆ
ಇನ್ನು ಕೆಲವು ಸಂಚಾರ ಪೊಲೀಸರು ಮತ್ತು ಆರ್ಟಿಒ ಅಧಿಕಾರಿಗಳು ಪ್ರತಿ ಅಕ್ರಮ ಆಟೋಗೆ ಮಾಸಿಕ 500 ರೂ. ಲಂಚವನ್ನು ನಿಗದಿಪಡಿಸಿದ್ದಾರೆ ಎಂಬ ಆರೋಪವಿದೆ. 500 ರೂ. x 20,00,000 ಆಟೋಗಳು ಎಂದರೆ ಪ್ರತಿ ತಿಂಗಳು ಆರ್ಟಿಒ ಮತ್ತು ಸಂಚಾರ ಅಧಿಕಾರಿಗಳಿಗೆ 100 ಕೋಟಿ ಲಂಚವನ್ನು ಪಾವತಿಸಲಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಹೀಗಾಗಿ ಅಕ್ರಮ ತಡೆಗೆ ತಕ್ಷಣದ ಕ್ರಮದ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.