ಪಾಟ್ನಾ: ಹಾವೆಂದರೆ ಎಲ್ಲರೂ ಮಾರುದ್ದ ಓಡುತ್ತಾರೆ. ಇತ್ತೀಚೆಗೆ ಹಾವಿಗೆ ಸಂಬಂಧಪಟ್ಟ ಅನೇಕ ಪ್ರಕರಣಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಬಿಹಾರದ ಬೇಗುಸರಾಯ್ನ ಒಂದು ಸಣ್ಣ ಹಳ್ಳಿಯ ಯುವಕ ರಾಕೇಶ್ ಕುಮಾರ್ ಎಂಬಾತ ಹೆಬ್ಬಾವು ಮತ್ತು ವಿಷಪೂರಿತ ಹಾವುಗಳು ಸೇರಿದಂತೆ 40 ಉರಗಗಳೊಂದಿಗೆ ವಾಸಿಸುತ್ತಾನೆ. ಒಂದು ಕಾಲದಲ್ಲಿ ಎಂಜಿನಿಯರ್ ಆಗಬೇಕೆಂದು ಕನಸು ಕಂಡಿದ್ದ ಈ ಯುವಕ ಈಗ ಹಾವುಗಳ ರಕ್ಷಕನಾಗಿದ್ದಾನೆ. ಹಾಗಾಗಿ ಅವನನ್ನು ಎಲ್ಲರೂ ‘ದಿ ಸ್ನೇಕ್ ಗಾರ್ಡಿಯನ್’ ಎಂದು ಕರೆಯುತ್ತಾರೆ. ಈತ ಹಾವುಗಳ (Snake) ಜತೆ ಆಟವಾಡುತ್ತ ಇರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ಐಟಿಐ ಪದವೀಧರ ರಾಕೇಶ್ ಈಗ ತನ್ನ ಮನೆಯಲ್ಲಿ 40 ಹಾವುಗಳೊಂದಿಗೆ ವಾಸಿಸುತ್ತಿದ್ದಾನೆ. ಅವುಗಳಲ್ಲಿ ಕೆಲವು ವಿಷಪೂರಿತವಾಗಿದ್ದರೆ, ಇನ್ನುಳಿದವುಗಳಲ್ಲಿ ಹೆಬ್ಬಾವುಗಳು ಮತ್ತು ಕುದುರೆ-ಹಾವುಗಳು ಸೇರಿವೆ. ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಅವನು ಹಾವುಗಳೊಂದಿಗೆ ಹೇಗೆ ಮಾತನಾಡುತ್ತಾನೆ, ಮುಟ್ಟುತ್ತಾನೆ ಮತ್ತು ಅವುಗಳೊಂದಿಗೆ ಭಯವಿಲ್ಲದೆ ಆಟವಾಡುತ್ತಾನೆ ಎಂಬುದೇ ಎಲ್ಲರಿಗೂ ಅಚ್ಚರಿ.
ಅವನು ತನ್ನ ಕೆಲವು ಸ್ನೇಹಿತರಿಗೆ ಹಾವು ರಕ್ಷಣೆಯ ಕುರಿತು ತರಬೇತಿ ನೀಡಿದ್ದಾನೆ. ಅದು ಅಲ್ಲದೇ ಅವನು ತನ್ನ ಮನೆಯಲ್ಲಿ ವಿಷಪೂರಿತ ಹಾವುಗಳು ಸೇರಿದಂತೆ 40 ಹಾವುಗಳನ್ನು ಸಾಕುತ್ತಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹಾವುಗಳನ್ನು ಹಿಡಿಯುವಾಗ ಹಲವಾರು ಬಾರಿ ಕಚ್ಚಿಸಿಕೊಂಡಿದ್ದಾನೆ. ಬೇಗುಸರಾಯ್, ಖಗಾರಿಯಾ ಮತ್ತು ಮುಂಗೇರ್ನಾದ್ಯಂತ ಜನರು ಹಾವು ಕಂಡುಬಂದಾಗಲೆಲ್ಲಾ ಅವನನ್ನು ಸಂಪರ್ಕಿಸುತ್ತಾರೆ. ಅವನು ಹಾವುಗಳನ್ನು ಸುರಕ್ಷಿತವಾಗಿ ಹಿಡಿಯುವುದಲ್ಲದೆ, ಅವುಗಳನ್ನು ಮತ್ತೆ ಕಾಡಿಗೆ ಬಿಡುತ್ತಾನೆ. ಸದ್ಯ ಆತನ ಉರಗ ಪ್ರೇಮ ಕಂಡು ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಿಮಾನ ವಿಳಂಬ; ಸಿಬ್ಬಂದಿ, ಪ್ರಯಾಣಿಕನ ಸಂಭಾಷಣೆ ಕೇಳಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು
ಎಸಿಯೊಳಗೆ ಕಾಣಿಸಿಕೊಂಡ ಹಾವು!
ಇತ್ತೀಚೆಗೆ ವಿಶಾಖಪಟ್ಟಣಂ ಜಿಲ್ಲೆಯ ಪೆಂಡುರ್ತಿಯಲ್ಲಿ ಸತ್ಯನಾರಾಯಣ ಎಂಬ ವ್ಯಕ್ತಿ ಎಸಿಯನ್ನು ಆನ್ ಮಾಡಲು ಹೋಗಿ ಬೆಚ್ಚಿಬಿದ್ದ ಘಟನೆಯೊಂದು ನಡೆದಿತ್ತು. ಎಸಿಯೊಳಗೆ ಹಾವೊಂದು ತನ್ನ 8-10 ಮರಿಗಳೊಂದಿಗೆ ಬೆಚ್ಚಗೆ ಮಲಗಿತ್ತು. ಸುಮಾರು ದಿನಗಳಿಂದ ಎಸಿ ಬಳಸದ ಹಿನ್ನೆಲೆ ಹಾವೊಂದು ಅದರೊಳಗೆ ಹೊಕ್ಕು ಮರಿ ಹಾಕಿದೆ. ಎಸಿ ಆನ್ ಮಾಡಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೊ ಈಗ ಸೋಶಿಯಲ್ ವಿಡಿಯೊದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.