ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ (Chief minister), ಕೆಪಿಸಿಸಿ ಅಧ್ಯಕ್ಷರ (KPCC president) ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ. ಶಾಸಕರ ಜತೆಗಿನ ಮುಖಾಮುಖಿ ಸಭೆಯಲ್ಲೂ ಈ ವಿಚಾರ ಚರ್ಚೆಯಾಗುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ (randeep surjewala) ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರೊಂದಿಗಿನ ಸಭೆಯಲ್ಲಿ ಪಕ್ಷದ ಸಂಘಟನೆ ಮತ್ತು ಆಡಳಿತ ಕುರಿತ ವೈಯಕ್ತಿಕ ಅಭಿಪ್ರಾಯವನ್ನಷ್ಟೇ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದೆರಡು ದಿನಗಳಲ್ಲಿ ಮೈಸೂರು ಮತ್ತು ಬೆಂಗಳೂರು ವಿಭಾಗದ ಶಾಸಕರ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಮುಂದಿನ ಸೋಮವಾರದಿಂದ ಇತರ ಭಾಗದ ಶಾಸಕರನ್ನು ಕರೆದು ಮಾತನಾಡುತ್ತೇನೆ. ನಂತರದಲ್ಲಿ ಸಂಸದರು, ಮಾಜಿ ಸಂಸದರನ್ನು ಭೇಟಿ ಮಾಡಲಾಗುವುದು. ಈ ಸಭೆಗಳಲ್ಲಿ ಕಳೆದೆರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಶಾಸಕರಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸೇರಿ ಇತರ ವಿಭಾಗಗಳ ಚಟುವಟಿಕೆ ಕುರಿತು ಮಾಹಿತಿ ಪಡೆಯಲಾಗುವುದು ಎಂದರು.
ಬಹಿರಂಗ ಹೇಳಿಕೆ ಸರಿಯಲ್ಲ
ಸರ್ಕಾರದ ಕುರಿತು ಶಾಸಕರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೇ ಆಗಲಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಎಷ್ಟೇ ಅಸಮಾಧಾನವಿದ್ದರೂ ಅದನ್ನು ಬಹಿರಂಗಪಡಿಸಲು ವೇದಿಕೆಯಿದೆ. ಬಹಿರಂಗವಾಗಿ ಮಾತನಾಡಲು ಅವಕಾಶವಿಲ್ಲ. ನನ್ನೊಂದಿಗೆ ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎಂದರು.
ಮುಖಾಮುಖಿ ಸಭೆಯಲ್ಲಿ ಶಾಸಕರ ರಿಪೋರ್ಟ್ ಕಾರ್ಡ್ ಪಡೆಯುತ್ತಿದ್ದೇನೆ. ಶಾಸಕರ ಆಕಾಂಕ್ಷೆಗಳು, ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಅದನ್ನು ರಾಜ್ಯ ಸರ್ಕಾರದ ಗಮನಕ್ಕೂ ತರುತ್ತೇನೆ. ಪಂಚ ಗ್ಯಾರಂಟಿಗಳ ಅನುಷ್ಠಾನದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇನ್ನೂ ಐದಾರು ದಿನ ಇಲ್ಲೇ ಇರುತ್ತೇನೆ. ಎಲ್ಲ ಶಾಸಕರು, ಸಂಸದರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: DK Shivakumar: ಶಾಸಕರ ಜತೆ ಸುರ್ಜೇವಾಲ ಮಾತುಕತೆ; ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ ಎಂದ ಡಿಕೆಶಿ