ಕೋಲಾರ :
ಬೆಳಗಾವಿಯ ಸಾಧನಾ ಸಮಾವೇಶದಲ್ಲಿ ತಮ್ಮಿಂದ ಅವಮಾನಕ್ಕೆ ಒಳಗಾದ ಅಡಿಷನಲ್ ಎಸ್ಪಿಯೇ ಸುಮ್ಮನಿದ್ದಾನೆ, ನಿನಗ್ಯಾಕಯ್ಯ ಅದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ.
ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಬೆಳಗಾವಿ ಅಡಿಷನಲ್ ಎಸ್ ಪಿ.ನಾರಾಯಣ ಬರಮಣಿ ರಾಜೀನಾಮೆ ನೀಡಲು ಮುಂದಾಗಿರುವ ಕುರಿತು ಪ್ರಶ್ನಿಸಿದಾಗ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಹೀಗಿತ್ತು, ಇದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಅವತ್ತಿನ ಘಟನೆ ಉದ್ದೇಶ ಪೂರ್ವಕವಾಗಿ ನಡೆದಿದ್ದಲ್ಲ.
ಮುಖ್ಯಮಂತ್ರಿಗಳು ಆ ಕ್ಷಣದಲ್ಲಿ ಆವೇಶಕ್ಕೆ ತುತ್ತಾದಾಗ ಆ ಪ್ರತಿಕ್ರಿಯೆ ನೀಡಿದ್ದಾರೆಯೇ ಹೊರತು ಬೇರೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಸಮರ್ಥಿಸಿಕೊಂಡರು. ಪೊಲೀಸ್ ಅಧಿಕಾರಿ ಜೊತೆ ನಾನು ಮತ್ತು ಹೆಚ್.ಕೆ.ಪಾಟೀಲರು ಮಾತನಾಡಿದ್ದೇವೆ. ಅವರಿಗೆ ಪೋಸ್ಟಿಂಗ್ ಸಹ ನೀಡಲಾಗಿದೆ. ಎಲ್ಲವೂ ಸರಿ ಹೋಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು. ಎರಡು ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಸಾಧನ ಸಮಾವೇಶದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭದ್ರತಾ ಲೋಪ ಕುರಿತು ಆಕ್ರೋಶ ವ್ಯಕ್ತಪಡಿಸಿ ಅಡಿಷನಲ್ ಎಸ್ ಪಿ ನಾರಾಯಣ ಬರಮಣಿ ಅವರ ಮೇಲೆ ಏರಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ನಾರಾಯಣ ಬರಮಣಿ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.