ನವದೆಹಲಿ:
ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸ – ರಾಜ್ ನಿವಾಸ್ ಮಾರ್ಗದಲ್ಲಿರುವ ಬಂಗಲೆ ಸಂಖ್ಯೆ 1 – ಈ ತಿಂಗಳು 60 ಲಕ್ಷ ರೂ.ಗಳ ನವೀಕರಣಕ್ಕೆ ಒಳಗಾಗಲಿದೆ. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಹೊರಡಿಸಿದ ಟೆಂಡರ್ ಸೂಚನೆಯ ಪ್ರಕಾರ, ನವೀಕರಣವು ಮುಖ್ಯವಾಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೊಂದಿದೆ. ಟೆಂಡರ್ಗಾಗಿ ಬಿಡ್ಗಳು ಜುಲೈ 4 ರಂದು ತೆರೆಯಲ್ಪಡುತ್ತವೆ ಮತ್ತು 60 ದಿನಗಳ ಅವಧಿಯಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೇಖಾ ಗುಪ್ತಾ ಅವರಿಗೆ ಎರಡು ಬಂಗಲೆಗಳನ್ನು ನೀಡಲಾಗಿದೆ – 1 ಮತ್ತು 2. ಅವರು ವಾಸಿಸಲು ಬಂಗಲೆ ಸಂಖ್ಯೆ 1 ಅನ್ನು ಬಳಸುತ್ತಾರೆ, ಆದರೆ ಬಂಗಲೆ ಸಂಖ್ಯೆ 2 ಅನ್ನು ಕ್ಯಾಂಪ್ ಆಫೀಸ್ ಆಗಿ ಬಳಸಲಾಗುತ್ತದೆ.
ಜೂನ್ 28 ರಂದು ನೀಡಲಾದ ಟೆಂಡರ್ನಲ್ಲಿ 60 ಲಕ್ಷ ರೂ.ಗಳಲ್ಲಿ 9.3 ಲಕ್ಷ ರೂ. ಮೌಲ್ಯದ ಐದು ಟಿವಿಗಳನ್ನು ಮುಖ್ಯಮಂತ್ರಿಯವರ ಮನೆಯಲ್ಲಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ. 7.7 ಲಕ್ಷ ರೂ. ಮೌಲ್ಯದ 14 ಎಸಿಗಳು ಮತ್ತು 5.74 ಲಕ್ಷ ರೂ. ಮೌಲ್ಯದ 14 ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗುವುದು. ಮನೆಯಲ್ಲಿ 2 ಲಕ್ಷ ರೂ.ಗಳ ನಿರಂತರ ವಿದ್ಯುತ್ ಸರಬರಾಜು (ಯುಪಿಎಸ್) ವ್ಯವಸ್ಥೆಯೂ ಇರುತ್ತದೆ. ಹೆಚ್ಚುವರಿಯಾಗಿ, 1.8 ಲಕ್ಷ ರೂ.ಗೆ ರಿಮೋಟ್ ಕಂಟ್ರೋಲ್ ಹೊಂದಿರುವ 23 ಸೀಲಿಂಗ್ ಫ್ಯಾನ್ಗಳು, 85,000 ರೂ.ಗೆ ಒಂದು ಒಟಿಜಿ (ಓವನ್ ಟೋಸ್ಟ್ ಗ್ರಿಲ್), 77,000 ರೂ.ಗೆ ಹಾಗೂ 60,000 ರೂ.ಗೆ ಒಂದು ಸ್ವಯಂಚಾಲಿತ ವಾಷಿಂಗ್ ಮೆಷಿನ್ ಮತ್ತು ಒಂದು ಡಿಶ್ವಾಶರ್, 63,000 ರೂ. ಗ್ಯಾಸ್ ಸ್ಟೌವ್, 32,000 ರೂ. ಮೌಲ್ಯದ ಮೈಕ್ರೋವೇವ್ಗಳು ಮತ್ತು 91,000 ರೂ.ಗೆ ಆರು ಗೀಸರ್ಗಳನ್ನು ಅಳವಡಿಸಲಾಗುವುದು ಎಂದು ತಿಳಿದು ಬಂದಿದೆ.
ಒಟ್ಟು 115 ದೀಪಗಳು, ವಾಲ್ ಲೈಟರ್ಗಳು, ಹ್ಯಾಂಗಿಂಗ್ ಲೈಟ್ಗಳನ್ನು ಮನೆಯೊಗಳಗೆ ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತಾ ಅವರು ಶಾಲಿಮಾರ್ ಬಾಗ್ನಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀಮತಿ ಗುಪ್ತಾ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹಿಂದಿನ ಅಧಿಕೃತ ನಿವಾಸ – ರಾಷ್ಟ್ರ ರಾಜಧಾನಿಯ 6 ಫ್ಲ್ಯಾಗ್ಸ್ಟಾಫ್ ರಸ್ತೆಯಲ್ಲಿರುವ ಬಂಗಲೆಯಲ್ಲಿ ವಾಸಿಸುತ್ತಿಲ್ಲ. ಕೇಜ್ರಿವಾಲ್ ವಾಸಿಸುತ್ತಿದ್ದ ಶೀಶ್ ಮಹಲ್ ವಿವಾದ ಕೇಂದ್ರವಾಗಿತ್ತು.
ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಶೀಶ್ಮಹಲನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸುವುದಾಗಿ ಘೋಷಿಸಿತ್ತು. 40,000 ಚದರ ಗಜಗಳಿಗಿಂತ ಹೆಚ್ಚು ವಿಸ್ತೀರ್ಣದ ಐಷಾರಾಮಿ ನಿವಾಸವಾದ ಪುನರ್ನಿರ್ಮಿಸಲಾದ ಬಂಗಲೆ 2015 ರಿಂದ ಅಕ್ಟೋಬರ್ 2024 ರವರೆಗೆ ಕೇಜ್ರಿವಾಲ್ ಅವರ ಅಧಿಕೃತ ನಿವಾಸವಾಗಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರು ಆ ನಿವಾಸವನ್ನು ತೊರೆದಿದ್ದರು.