ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ಇಲ್ಲಿನ ಎಜ್ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ (IND vs ENG) ಭಾರತ ತಂಡದ ಪ್ಲೇಯಿಂಗ್ XI ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸ್ಪಿನ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಡಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಾಷಿಂಗ್ಟನ್ ಸುಂದರ್ ಅವರ ಬದಲು ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ (Kuldeep Yadav) ಅವರನ್ನು ಆಡಿಸಬೇಕಿತ್ತು ಎಂದಿದ್ದಾರೆ.
ಎಜ್ಬಾಸ್ಟನ್ ಟೆಸ್ಟ್ಗೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಮೂರು ಬದಲಾವಣೆಯನ್ನು ತರಲಾಗಿದೆ. ಸಾಯಿ ಸುದರ್ಶನ್, ಜಸ್ಪ್ರೀತ್ ಬುಮ್ರಾ ಹಾಗೂ ಶಾರ್ದುಲ್ ಠಾಕೂರ್ ಅವರನ್ನು ಕೈ ಬಿಡಲಾಗಿದೆ. ಇವರ ಸ್ಥಾನಗಳಿಗೆ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಹಾಗೂ ಆಕಾಶ್ ದೀಪ್ಗೆ ಸ್ಥಾನವನ್ನು ನೀಡಲಾಗಿದೆ. ಅಂದ ಹಾಗೆ ಮೊದಲನೇ ಟೆಸ್ಟ್ ಪಂದ್ಯದ ಬಳಿಕ ಬರ್ಮಿಂಗ್ಹ್ಯಾಮ್ನಲ್ಲಿ ಕುಲ್ದೀಪ್ ಯಾದವ್ಗೆ ಅವಕಾಶ ನೀಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಟೀಮ್ ಮ್ಯಾನೇಜ್ಮೆಂಟ್ ಕುಲ್ದೀಪ್ ಯಾದವ್ ಬದಲು ವಾಷಿಂಗ್ಟನ್ ಸುಂದರ್ಗೆ ಸ್ಥಾನವನ್ನು ಕಲ್ಪಿಸಲಾಗಿದೆ.
ಸೋನಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸೌರವ್ ಗಂಗೂಲಿ, ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಇಬ್ಬರು ಉತ್ತಮ ಸ್ಪಿನ್ನರ್ಗಳಿದ್ದಾರೆಂದು ನನಗೆ ಅನಿಸುತ್ತಿಲ್ಲ. ಆ ಮೂಲಕ ಕುಲ್ದೀಪ್ ಯಾದವ್ ಅವರನ್ನು ಭಾರತ ತಂಡದ ಪ್ಲೇಯಿಂಗ್ XIನಿಂದ ಹೊರಗಿಟ್ಟ ಬಗ್ಗೆ ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ.