ನವದೆಹಲಿ: ಭಾರತದ ಪ್ರಧಾನಿ ಅವರೊಂದಿಗೆ ನಮ್ಮ ಕರುನಾಡಿನ ಕರಕುಶಲತೆಯುಳ್ಳ ಬಿದ್ರಿವೇರ್ ಹೂದಾನಿ ಸಹ ವಿಶ್ವಪ್ರಸಿದ್ಧಿಗೆ ಪಾತ್ರವಾಗಿದೆ. ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗುರುವಾರ ಘಾನಾ ಅಧ್ಯಕ್ಷರಿಗೆ ಬೀದರ್ನಲ್ಲಿ ಸಿದ್ಧವಾದ ಬಿದ್ರಿವೇರ್ ಹೂದಾನಿಯನ್ನೇ ಉಡುಗೊರೆಯಾಗಿ ನೀಡಿದ್ದು ವಿಶೇಷ. ಮೂವತ್ತು ವರ್ಷಗಳ ಬಳಿಕ ಭಾರತದ ಪ್ರಧಾನಿ ಘಾನಾ ಪ್ರವಾಸ ಕೈಗೊಂಡ ಸವಿನೆನಪಿಗೆ ಭಾರತ ಮತ್ತು ಘಾನಾ ದೇಶಗಳ ಸಾಂಸ್ಕೃತಿಕ ಸಂಬಂಧ ಬೆಸೆಯುವ ಪ್ರತೀಕವಾಗಿ ಸುಮಾರು 500 ವರ್ಷಗಳಷ್ಟು ಪ್ರಾಚೀನ ಕರಕುಶಲ ಕಲೆಯಲ್ಲಿ ಅರಳಿದ ಜಿಂಕ್-ತಾಮ್ರ-ಬೆಳ್ಳಿ ಸೊಬಗುಳ್ಳ ಬಿದ್ರಿವೇರ್ ಹೂದಾನಿ (ಹೂ ಕುಂಡ) ನೀಡಿ ಭಾರತದ ಪ್ರಾಚೀನತೆ ಜತೆಗೆ ಕರ್ನಾಟಕದ ಕೌಶಲ್ಯ ಸಿರಿಯನ್ನು ಪಸರಿಸಿದರು.
ಬೀದರ್ ಕೀರ್ತಿ ಘಾನಾವರೆಗೆ
ಪ್ರಧಾನಿ ನರೇಂದ್ರ ಮೋದಿ ಪ್ರತಿ ಬಾರಿ ವಿದೇಶ ಪ್ರವಾಸ ಕೈಗೊಂಡಲೂ ಭಾರತವನ್ನು ವಿಭಿನ್ನವಾಗಿಯೇ ಪರಿಚಯಿಸುವ ವಿಶಿಷ್ಠ ಉಡುಗೊರೆ ಕೊಡುತ್ತಲೇ ಬಂದಿದ್ದಾರೆ. ಆ ಮೂಲಕ ಭಾರತದ ವೈವಿಧ್ಯ-ವೈಶಿಷ್ಟ್ಯತೆಗಳನ್ನು ಜಗತ್ತಿನಾದ್ಯಂತ ಪಸರಿಸುತ್ತಿದ್ದಾರೆ. ಅಂತೆಯೇ ಈಗ ಘಾನಾ ಅಧ್ಯಕ್ಷರು ಮತ್ತು ಅವರ ಪತ್ನಿಗೆ ವಿಶಿಷ್ಟ ಕಲಾಕೃತಿಯ ಬಿದ್ರಿವೇರ್ ಹೂದಾನಿ ನೀಡುವ ಮೂಲಕ ಬೀದರ್ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಏರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬೀದರ್ನಿಂದ ತರಿಸಿಕೊಂಡಿದ್ದ ಈ ಬಿದ್ರಿವೇರ್ ಹೂದಾನಿ ಕಪ್ಪು ವರ್ಣರಂಜಿತವಾಗಿದ್ದು, ಬೆಳ್ಳಿಯ ಕುಸುರಿ ಕೂಡ ಹೊಂದಿದೆ. ಭಾರತದ ಪ್ರಸಿದ್ಧ ಲೋಹದ ಕರಕುಶಲತೆಯನ್ನು ಪ್ರದರ್ಶಿಸುತ್ತದೆ. ಶತಮಾನಗಳಷ್ಟು ಹಳೆಯದಾದರೂ ವಿಶಿಷ್ಟ ತಾಂತ್ರಿಕತೆ, ಕುಶಲಕರ್ಮಿಗಳ ಆಕರ್ಷಕ ಕೌಶಲ್ಯ ಅಡಕವಾಗಿದೆ. ಸೌಂದರ್ಯ-ಸಮೃದ್ಧಿಯನ್ನು ಸಂಕೇತಿಸುವ ಹೂವಿನ ವಿನ್ಯಾಸದಿಂದ ಕೆತ್ತಲಾಗಿದೆ.
ಈ ಸುದ್ದಿಯನ್ನೂ ಓದಿ | IBPS Recruitment 2025: 6,215 ಹುದ್ದೆಗಳ ಭರ್ತಿಗೆ ಮುಂದಾದ ಐಬಿಪಿಎಸ್; ಅಪ್ಲೈ ಮಾಡುವ ವಿಧಾನ ಇಲ್ಲಿದೆ