ಬಿ.ವಿ.ಮಹೇಶ್ ಚಂದ್ರ
ವಿಶ್ವದಲ್ಲೇ ಎಲ್ಲೇ ಯುದ್ಧವಾಗಲೀ, ಯಾವುದೇ ದೇಶಗಳ ನಡುವೆ ಸಮರ ಶುರುವಾಗಲೀ ತೈಲೋತ್ಪನ್ನ ದೇಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳಿಗೂ ಆತಂಕ ಶುರುವಾಗುತ್ತದೆ. ಯುದ್ಧದ ಕಾರಣದಿಂದ ಕಚ್ಚಾತೈಲ ಸರಬರಾಜಿನ ಮೇಲೆ ಮೊದಲು ಹೊಡೆತ ಬೀಳುತ್ತದೆ. ಹಾಗಾಗಿಯೇ ತೈಲೋತ್ಪನ್ನಗಳಿಗಾಗಿ ಬೇರೆ ದೇಶಗಳನ್ನು ಅವಲಂಬಿಸಿರುವ ದೇಶಗಳಿಗೆ ಯುದ್ಧ ಸುದ್ದಿ ಹೊರಹೊಮ್ಮುತ್ತಲೇ ಚಿಂತೆ ಶುರುವಾಗುತ್ತದೆ.
ಹಾಗಾಗಿಯೇ ಭಾರತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ. ಯುದ್ಧ, ಜಾಗತಿಕ ರಾಜಕೀಯ ಸಂಘರ್ಷ, ಪ್ರಾಕೃತಿಕ ವಿಕೋಪ ಮೊದಲಾದ ಸಂದರ್ಭಗಳಲ್ಲಿ ಕಚ್ಚಾತೈಲದ ಪೂರೈಕೆ ಸ್ಥಗಿತಗೊಂಡರೆ ಕಷ್ಟ ಎಂಬ ಕಾರಣಕ್ಕೇ ನೆಲದಾಳದಡಿ ಬೃಹತ್ ಕಚ್ಚಾತೈಲ ಸಂಗ್ರಹಾಗಾರಗಳನ್ನು ನಿರ್ಮಿಸುವುದಕ್ಕೆ ಮೊದಲಿಟ್ಟಿದೆ. ಈಗಾಗಲೇ ದೇಶದಲ್ಲಿ 3 ಬೃಹತ್ ಪ್ರಮಾಣದ ಕಚ್ಚಾತೈಲ ಸಂಗ್ರಹಾಗಾರಗಳಿವೆ. ಹೊಸದಾಗಿ ಇನ್ನೂ ಎರಡು ಬೃಹತ್ ತೈಲ ಸಂಗ್ರಹಾಗಾರಗಳು ನಿರ್ಮಾಣ ಹಂತದಲ್ಲಿವೆ. ಈಗ ಕಾರ್ಯನಿರ್ವಹಿಸುತ್ತಿರುವ ೩ ತೈಲ ಸಂಗ್ರಹಾಗಾರಗಳಿಂದ ಒಟ್ಟು ೫೩.೩೦ ಲಕ್ಷ ಮೆಟ್ರಿಕ್ ಟನ್ ಕಚ್ಚಾತೈಲ ಸಂಗ್ರಹಿಸಲು ಸಾಧ್ಯವಾಗಿದೆ. ಅಲ್ಲದೇ, ಒಟ್ಟು ೬೫ ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ೨ ಹೊಸ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ತುರ್ತು ಸಂದರ್ಭದ ಬಳಕೆಗಾಗಿ ಮೀಸಲಿಡಲಿರುವ ಕಚ್ಚಾತೈಲ ಸಂಗ್ರಹದ ಒಟ್ಟು ಪ್ರಮಾಣ ೧.೧೮ ಕೋಟಿ ಟನ್ಗಳಿಗೆ ಏರಿಕೆಯಾಗ ಲಿದೆ.
ಯುದ್ಧವಾದರೆ ಕಚ್ಚಾತೈಲ ಪೂರೈಕೆಗೆ ಅಡ್ಡಿ ಇರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತು. ಪರಿಣಾಮ, ಆಗಿನಿಂದ ಭಾರತ ಇರಾನ್ನಿಂದ ಕಚ್ಚಾತೈಲ ಖರೀದಿ ನಿಲ್ಲಿಸಬೇಕಾಯಿತು. ಆದರೆ, ಇರಾಕ್, ಸೌದಿ ಅರೇಬಿಯ, ಕುವೇತ್, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲ ಖರೀದಿಸಲು ಆರಂಭಿಸಿತು.
ಇದನ್ನೂ ಓದಿ: Roopa Gururaj Column: ಭಾಗವತದಲ್ಲಿ ಬರುವ ತುಳಸಿ ಕಥೆ
ಇದೇ ಸಂದರ್ಭದಲ್ಲಿ ರಷ್ಯಾ-ಉಕ್ರೇನ್ ನಡುವೆ ಮೂರು ವರ್ಷಗಳ ಹಿಂದೆ ಯುದ್ಧ ಶುರುವಾಯಿತು. ಆಗಲೂ ಅಮೆರಿಕ ರಷ್ಯಾ ವಿರುದ್ಧ ನಿರ್ಬಂಧ ಹೇರಿತು. ಪರಿಣಾಮ ರಷ್ಯಾ ದೇಶದಿಂದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲವನ್ನು ಅಮೆರಿಕ, ಯೂರೋಪ್ ಖಂಡದ ದೇಶಗಳು ಸೇರಿದಂತೆ ವಿಶ್ವದ ಬಹಳಷ್ಟು ದೇಶಗಳು ರಷ್ಯಾದಿಂದ ಕಚ್ಚಾತೈಲ ಆಮದು ನಿಲ್ಲಿಸಿದವು.
ಆಗ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲವನ್ನು ದೀರ್ಘಾವಧಿಗೆ ಸಂಗ್ರಹಿಸಿಟ್ಟುಕೊಳ್ಳಲು ಆಗದ ಕಾರಣ ರಷ್ಯಾ ಅತಿ ಕಡಿಮೆ ಬೆಲೆಗೆ ಕಚ್ಚಾತೈಲ ಮಾರುವುದಾಗಿ ಹೇಳಿತು. ಆದರೂ ಹೆಚ್ಚಿನ ದೇಶಗಳು ರಷ್ಯಾದಿಂದ ತೈಲ ಖರೀದಿಗೆ ಮುಂದಾಗಲಿಲ್ಲ. ಆದರೆ, ಭಾರತ ಮಾತ್ರ ಅಮೆರಿಕದ ನಿರ್ಬಂಧ ಆದೇಶವನ್ನು ಲೆಕ್ಕಿಸದೇ ಪರಮಾಪ್ತ ಮಿತ್ರರಾಷ್ಟ್ರವಾದ ರಷ್ಯಾದಿಂದಲೇ ಹೆಚ್ಚಿನ ಪ್ರಮಾಣದ ಕಚ್ಚಾತೈಲ ಖರೀದಿಸಿತು. ಆ ಮೂಲಕ ದಶಕಗಳ ಕಾಲದ ರಷ್ಯಾ ಜತೆಗಿನ ಸ್ನೇಹಕ್ಕೂ ಗೌರವ ನೀಡಿತು, ಕಡಿಮೆ ಬೆಲೆಗೆ ಕಚ್ಚಾತೈಲ ಖರೀದಿಸಿ ಆರ್ಥಿಕವಾಗಿ ಲಾಭವನ್ನೂ ಮಾಡಿ ಕೊಂಡಿತು.
ಭಾರತದ ಬೃಹತ್ ತೈಲ ಸಂಗ್ರಹಾಗಾರಗಳು ೫ ಕಚ್ಚಾತೈಲಕ್ಕೆ ಯಾವುದೇ ಸಂದರ್ಭದಲ್ಲಿಯೂ ದೇಶದಲ್ಲಿ ಕೊರತೆ ಆಗಬಾರದು ಎಂಬ ಮುಂಜಾಗರೂಕತೆಯಿಂದ ಭಾರತ ಸರಕಾರ ಈಗಾಗಲೇ ದೇಶದ ಮೂರು ಕಡೆ ಬೃಹತ್ ಕಚ್ಚಾತೈಲ ಸಂಗ್ರಾಹಾಗಾರಗಳನ್ನು ನಿರ್ಮಿಸಿದೆ. ಆ ಮೂರರಲ್ಲಿ ಎರಡು ಬೃಹತ್ ತೈಲ ಸಂಗ್ರಾಹಾಗಾರಗಳು ಕರ್ನಾಟಕದಲ್ಲಿಯೇ ಇವೆ. ಕರ್ನಾಟಕದ ಮಂಗಳೂರಿ ನಲ್ಲಿ ಮತ್ತು ಪಕ್ಕದ ಜಿಲ್ಲೆ ಉಡುಪಿಯ ಪಾದೂರಿನಲ್ಲಿ ಬೃಹತ್ ಗಾತ್ರದ ಕಚ್ಚಾತೈಲ ಸಂಗ್ರಹಾಗಾರ ಗಳನ್ನು ನೆಲೆಗೊಳಿಸಲಾಗಿದೆ.
ಮೂರನೆಯ ಬೃಹತ್ ಕಚ್ಚಾತೈಲ ಸಂಗ್ರಹಾಗಾರ ನೆರೆಯ ಆಂಧ್ರಪ್ರದೇಶದಲ್ಲಿದೆ. ಕಡಲತೀರ ವಿಶಾಖಪಟ್ಟಣಂನಲ್ಲಿ ತೈಲ ಸಂಗ್ರಾಹಾಗಾರ ನಿರ್ಮಿಸಲಾಗಿದೆ. ಈ 3 ತೈಲ ಸಂಗ್ರಹಾಗಾರಗಳ ಜತೆಗೆ ಇನ್ನೂ ಎರಡು ಸಂಗ್ರಹಾಗಾರಗಳನ್ನು ಪೂರ್ವ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ನಿರ್ಮಿಸ ಲಾಗುತ್ತಿದೆ.
ನಿರ್ಮಾಣ ಹಂತದ ಯೋಜನೆಗಳು
ದೇಶದಲ್ಲಿ ಈಗಾಗಲೇ 3 ಬೃಹತ್ ಕಚ್ಚಾತೈಲ ಸಂಗ್ರಹಾಗಾರಗಳಿವೆ. ಈ ಸಂಖ್ಯೆಯನ್ನು 5ಕ್ಕೆ ಹೆಚ್ಚಿಸಲೆಂದೇ ಪೆಟ್ರೋಲಿಯಂ ಸಚಿವಾಲಯ ಕರ್ನಾಟಕದ ಉಡುಪಿ ಜಿಲ್ಲೆಯ ಪಾದೂರಿನಲ್ಲಿ ಮತ್ತೊಂದು ‘ವಿಸ್ತರಣಾ ಘಟಕ’ವನ್ನು ನಿರ್ಮಿಸುತ್ತಿದೆ. ಇನ್ನೊಂದೆಡೆ, ದೇಶದ ಪೂರ್ವದ ಕಡಲು ಬಂಗಾಳ ಕೊಲ್ಲಿಗೆ ಸಮೀಪದಲ್ಲಿ, ಒಡಿಶಾ ರಾಜ್ಯದ ಚಂಡಿಖೋಲ್ ಪ್ರದೇಶದಲ್ಲಿಯೂ ಹೊಸದಾಗಿ ಕಚ್ಚಾತೈಲ ಸಂಗ್ರಹಾಗಾರ ನಿರ್ಮಿಸಲಾಗುತ್ತಿದೆ.
ಕರ್ನಾಟಕವೇ ಪ್ರಮುಖ: ಕಚ್ಚಾತೈಲವನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿ ಇಡಲು ಕರ್ನಾಟ ಕವೇ ಸೂಕ್ತ ಎಂಬುದನ್ನು ಕಂಡುಕೊಂಡಿರುವ ಕೇಂದ್ರದ ಪೆಟ್ರೋಲಿಯಂ ಸಚಿವಾಲಯ, ಒಟ್ಟು ಮೂರು ಕಚ್ಚಾತೈಲ ಸಂಗ್ರಹಾಗಾರಗಳನ್ನು ಕರ್ನಾಟಕದಲ್ಲಿಯೇ ನಿರ್ಮಿಸಿದೆ. ಉಡುಪಿ ಜಿಲ್ಲೆಯ ಪಾದೂರಿನಲ್ಲಿಯೇ ಮೂರನೇ ಬೃಹತ್ ಕಚ್ಚಾತೈಲ ಸಂಗ್ರಾಹಾಗಾರ ಸಿದ್ಧಗೊಳ್ಳುತ್ತಿದೆ.
‘ಪಾದೂರು-2ನೇ ಹಂತ’ದ ಕಚ್ಚಾತೈಲ ಸಂಗ್ರಹಾಗಾರ, ನಿರ್ಮಾಣ ಹಂತದಲ್ಲಿದೆ. ಇದನ್ನು ಈಗಾಗಲೇ ಉಡುಪಿ ಜಿಲ್ಲೆಯಲ್ಲಿರುವ ಪಾದೂರು ಮೊದಲ ಘಟಕದ ‘ವಿಸ್ತರಣಾ ಘಟಕ’ ಎಂದು ಗುರುತಿಸಲಾಗಿದೆ. ಉಳಿದಂತೆ ಮಂಗಳೂರಿನಲ್ಲೊಂದು ಕಚ್ಚಾತೈಲ ಸಂಗ್ರಹಾಗಾರವಿದೆ.
ಪ್ರಸ್ತುತ ಕಚ್ಚಾತೈಲ ಸಂಗ್ರಹ ಸಾಮರ್ಥ್ಯ 5.33 ಎಂಎಂಟಿ: ಭಾರತದ ಪ್ತಸ್ತುತ ಕಚ್ಚಾತೈಲ ಸಂಗ್ರಹ ಸಾಮರ್ಥ್ಯ ಎಷ್ಟಿದೆ ಎಂದರೆ, 53.30 ಲಕ್ಷ ಮೆಟ್ರಿಕ್ ಟನ್(5.33 ಎಂಎಂಟಿ). ಕರ್ನಾಟಕದ ಮಂಗಳೂರು, ಉಡುಪಿಯ ಪಾದೂರು ಘಟಕ-1 ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿನ 3 ಬೃಹತ್ ತೈಲ ಸಂಗ್ರಹಾಗಾರಗಳಲ್ಲಿಯೇ 53.30 ಲಕ್ಷ ಮೆಟ್ರಿಕ್ ಟನ್ ತೈಲ ಸಂಗ್ರಹಿಸಲಾಗಿದ್ದು, ಇದನ್ನು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ.
53.30 ಲಕ್ಷ ಮೆಟ್ರಿಕ್ ಟನ್ ಕಚ್ಚಾತೈಲ ಸಂಗ್ರಹವೆಂದರೆ 3.80 ಕೋಟಿ ಬ್ಯಾರೆಲ್ ಕಚ್ಚಾತೈಲಕ್ಕೆ ಸಮನಾಗಿರುತ್ತದೆ. ಇದಲ್ಲದೇ ಇನ್ನೂ ಎರಡು ಕಚ್ಚಾತೈಲ ಸಂಗ್ರಹಾಗಾರಗಳಿಗೆ 2021ರಲ್ಲಿಯೇ ಕೇಂದ್ರ ಸರಕಾರದ ಅನುಮೋದನೆ ದೊರೆತಿದ್ದು, ಸದ್ಯ ಕರ್ನಾಟಕದ ಉಡುಪಿ ಜಿಲ್ಲೆಯ ಪಾದೂರಿ ನಲ್ಲಿ ವಿಸ್ತರಣಾ ತೈಲ ಸಂಗ್ರಹಾಗಾರ ಮತ್ತು ಒಡಿಶಾ ರಾಜ್ಯದ ಚಾಂಡಿಖೋಲ್ನಲ್ಲಿ ಮತ್ತೊಂದು ಕಚ್ಚಾತೈಲ ಸಂಗ್ರಹಾಗಾರ ನಿರ್ಮಾಣಗೊಳ್ಳುತ್ತಿದೆ.
ಒಡಿಶಾದ ಚಂಡಿಖೋಲ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಚ್ಚಾತೈಲ ಸಂಗ್ರಹಾಗಾರದ ಸಾಮರ್ಥ್ಯ 40 ಲಕ್ಷ ಮೆಟ್ರಿಕ್ ಟನ್ಗಳಾಗಿದ್ದರೆ, ಉಡುಪಿಯ ಪಾದೂರಿನ ವಿಸ್ತರಣಾ ತೈಲ ಸಂಗ್ರಹಾಗಾರದ ಸಾಮರ್ಥ್ಯ 25 ಲಕ್ಷ ಮೆಟ್ರಿಕ್ ಟನ್ ಗಳಷ್ಟಿರಲಿದೆ. ಒಟ್ಟು 65 ಲಕ್ಷ ಮೆಟ್ರಿಕ್ ಟನ್ ಗಳಷ್ಟು ತೈಲ ಸಂಗ್ರಹಿಸಿಟ್ಟುಕೊಳ್ಳಬಲ್ಲ ಈ ಎರಡೂ ಹೊಸ ತೈಲ ಸಂಗ್ರಹಾಗಾರಗಳನ್ನು ಪಬ್ಲಿಕ್-ಪ್ರೈವೇಟ್ ಪಾರ್ಟ್ನರ್ಷಿಪ್ (ಪಿಪಿಪಿ) ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಕೇಂದ್ರದ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ತೈಲ ಸಂಗ್ರಹಾಗಾರಗಳ ಸಂಖ್ಯೆ 5ಕ್ಕೆ ಏರಿಕೆಯಾದ ಬಳಿಕ ದೇಶದಲ್ಲಿನ ಕಚ್ಚಾತೈಲ ಸಂಗ್ರಹ ಸಾಮರ್ಥ್ಯ, 1.18 ಕೋಟಿ ಮೆಟ್ರಿಕ್ ಟನ್ಗಳಿಗೆ ಹೆಚ್ಚಲಿದೆ.
ಯುದ್ಧವಾದರೆ ಕಷ್ಟ ಕಷ್ಟ
ಕಳೆದೊಂದು ದಶಕದಲ್ಲಿ ವಿಶ್ವದ ಒಂದಲ್ಲಾ ಒಂದು ಕಡೆ ಸಂಘರ್ಷ, ಸೇನಾ ಕಾರ್ಯಾಚರಣೆ, ಯುದ್ಧ ನಡೆದೇ ಇದೆ. ವಿಶ್ವದ ವಿವಿಧೆಡೆ ಯುದ್ಧಗಳಾದಾಗಲೆಲ್ಲಾ ಕಚ್ಚಾತೈಲ ಉತ್ಪಾದನೆ, ಸಂಗ್ರಹಣೆ, ಸಾಗಣೆಗೆ ತೊಂದರೆಯಾಗಿದೆ. ಕಚ್ಚಾತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಭಾರತದಂತಹ ಹಲವು ದೇಶಗಳು ಆ ಸಂದರ್ಭಗಳಲ್ಲೆಲ್ಲಾ ಸಂಕಷ್ಟಕ್ಕೀಡಾಗಿವೆ, ಬಹಳವಾಗಿ ಪರಿತಪಿಸಿವೆ. ಕಚ್ಚಾತೈಲ ಕೊರತೆ ಎದುರಾದರೆ ಕೈಗಾರಿಕೆಗಳ ಕಾರ್ಯಚಟುವಟಿಕೆಗೆ ತೊಡಕಾಗುತ್ತದೆ, ದೇಶದ ಇಡೀ ಸಾರಿಗೆ ಸಂಚಾರ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ. ಸರಕು ಸಾಗಣೆ ಸ್ಥಗಿತಗೊಳ್ಳುತ್ತದೆ. ಪರಿಣಾಮ ದೇಶದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ. ಹಾಗಾಗಿಯೇ, ಎಲ್ಲೋ ಯುದ್ಧವಾಗಿ, ಯಾವುದೋ ದೇಶದಲ್ಲಿ ರಾಜಕೀಯ ಸಂಘರ್ಷವಾಗಿ ಅಥವಾ ಕ್ರಾಂತಿ ನಡೆದು ಕಚ್ಚಾತೈಲ ಸಾಗಣೆ ವ್ಯವಸ್ಥೆಗೆ ಅಡ್ಡಿಯಾದರೂ ತೈಲೋತ್ಪನ್ನಗಳಿಗೆ ದೇಶದಲ್ಲಿ ಕೊರತೆಯಾಗ ದಿರಲಿ ಎಂಬ ದೂರಗಾಮಿ ಆಲೋಚನೆಯಿಂದಲೇ ಭಾರತ ಸರಕಾರ ನೆಲದಡಿ ಬೃಹತ್ ಗಾತ್ರದ ಕಚ್ಚಾತೈಲದ ಸಂಗ್ರಹಾಗಾರಗಳನ್ನು ದೇಶದ ವಿವಿಧೆಡೆ ನಿರ್ಮಿಸಿದೆ. ಈ ತೈಲಾಗಾರಗಳಿಂದ ಭಾರತಕ್ಕೆ ಹಲವು ತಿಂಗಳ ಕಾಲ ಕಚ್ಚಾತೈಲಕ್ಕೆ ಸಮಸ್ಯೆ ಎದುರಾಗದು. ಭಾರತ ತೈಲೋತ್ಪನ್ನಗಳ ಕೊರತೆ ಎದುರಿಸುವುದು ಕೆಲವು ತಿಂಗಳವರೆಗಾದರೂ ತಪ್ಪುತ್ತದೆ. ಅಂತಹ ಮುಂಜಾಗರೂಕತಾ ಕ್ರಮವನ್ನು ಭಾರತ ಸರಕಾರ ಕೈಗೊಂಡು ಜಾಣ್ಮೆ ಪ್ರದರ್ಶಿಸಿದೆ.
ಇತ್ತೀಚಿನ ಸಂಘರ್ಷ ಯುದ್ದಗಳು
4 ವರ್ಷಗಳ ಹಿಂದೆ ಅಣ್ವಸ ಹೊಂದಲು ಸಿದ್ಧವಾಗಿದ್ದಕ್ಕೆ ಇರಾನ್ ಮೇಲೆ ಅಮೆರಿಕ ನಿರ್ಬಂಧ ಹೇರಿತು. ಅದಾದ ಬಳಿಕ ‘ನ್ಯಾಟೊ’ ಒಕ್ಕೂಟ ಸೇರಲು ಮುಂದಾದ ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿತು. 2023ರ ಅಕ್ಟೋಬರ್ ೭ರಂದು ಗಾಜಾದಲ್ಲಿನ ಹಮಾಸ್ ಉಗ್ರ ಸಂಘಟನೆಯನ್ನು ಬಗ್ಗು ಬಡಿಯಲು ಇಸ್ರೇಲ್ ಸೇನಾ ಕಾರ್ಯಾಚರಣೆ ಶುರುವಿಟ್ಟಿತು.
ಪ್ಯಾಲೆಸ್ತೀನ್ ಬೆಂಬಲಕ್ಕೆ ಬಂದ ಇರಾನ್, ಟರ್ಕಿ, ಸಿರಿಯ, ಲೆಬನಾನ್ ಇನ್ನೊಂದೆಡೆ ಯೆಮೆನ್ನ ಹೌತಿ ಉಗ್ರ ಸಂಘಟನೆಗಳು ಇಸ್ರೇಲ್ ಮೇಲೆ ದಾಳಿ ಮಾಡಲಾರಂಭಿಸಿದವು. ಆಗ ಗಾಜಾಗಷ್ಟೇ ಸೀಮಿತವಾಗಿದ್ದ ಇಸ್ರೇಲ್ನ ಸೇನಾ ಕಾರ್ಯಾಚರಣೆ, ನೆರೆ ಹೊರೆಯ ಇರಾನ್, ಟರ್ಕಿ, ಸಿರಿಯ, ಲೆಬನಾನ್, ಯೆಮೆನ್ ನತ್ತಲೂ ವಿಸ್ತರಿಸಿತು. ಆ ಬಳಿಕ ದೊಡ್ಡ ಯುದ್ಧದ ಸ್ವರೂಪ ಪಡೆದು ಕೊಂಡಿತು.
ಪರಿಣಾಮ, ಆ ಭಾಗದಲ್ಲಿ ಸರಕು ಸಾಗಣೆ ಹಡಗುಗಳಿಗೆ, ಕಚ್ಚಾತೈಲ ಸಾಗಣೆ ನೌಕೆಗಳಿಗೆ ಸಮುದ್ರ ಸಂಚಾರವೇ ಕಷ್ಟವಾಯಿತು. ಇತ್ತೀಚೆಗೆ ಇರಾನ್ ವಿರುದ್ಧ ಇಸ್ರೇಲ್ ಮುಗಿಬಿದ್ದಿತ್ತು. ಅಮೆರಿಕವೂ ಇಸ್ರೇಲ್ಗೆ ಬೆಂಬಲವಾಗಿ ಇರಾನ್ನ ೩ ಪ್ರಮುಖ ಪರಮಾಣು ಘಟಕಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ಇರಾನ್ ‘ಹರ್ಮುಝ್ ಜಲಸಂಧಿ’ಯನ್ನು ಬಂದ್ ಮಾಡಿತ್ತು.
ಇದರಿಂದ ಮಧ್ಯಪ್ರಾಚ್ಯದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುವ ಭಾರತ ಮತ್ತಿತರ ದೇಶಗಳಿಗೆ ಬಲು ದೊಡ್ಡ ಹೊಡೆತ ಬೀಳಲಿತ್ತು. ಸದ್ಯ ಕದನ ವಿರಾಮ ಇಸ್ರೇಲ್-ಇರಾನ್ ಒಪ್ಪಿಕೊಂಡಿವೆ. ಯುದ್ಧ ಸದ್ಯಕ್ಕೆ ವಿರಾಮ ಪಡೆದಿದೆ. ಹರ್ಮುಝ್ ಜಲಸಂಧಿ ಬಂದ್ ಆಗುವುದು ತಪ್ಪಿದೆ.
ಹರ್ಮುಜ್ ಜಲಸಂಧಿಯು ಕಚ್ಚಾತೈಲ ಸಾಗಣೆ ಹಡಗುಗಳಿಗೆ ಬಲು ಮುಖ್ಯವಾದ ಸಮುದ್ರ ಮಾರ್ಗವಾಗಿದೆ. ಕಚ್ಚಾತೈಲ ಹಡಗುಗಳ ಸಂಚಾರ-ಸಾಗಣೆಯ ಇಡೀ ವಿಶ್ವದ ಒಟ್ಟು ವಹಿವಾಟಿನಲ್ಲಿ ಶೇ.20ಕ್ಕೂ ಅಧಿಕ ಪ್ರಮಾಣದ ಕಚ್ಚಾತೈಲ ಸಾಗಣೆ ಈ ಜಲಸಂಧಿಯ ಮೂಲಕವೇ ನಡೆಯುತ್ತದೆ.
ಭಾರತದ 1 ದಿನದ ಕಚ್ಚಾತೈಲ ಬಳಕೆ ಎಷ್ಟು?
೨೦೨೫ರ ಮೇ ತಿಂಗಳ ಲೆಕ್ಕದಲ್ಲಿ ಭಾರತದಲ್ಲಿ ಒಂದು ದಿನಕ್ಕೆ ಪೆಟ್ರೋಲ್, ಡೀಸೆಲ್, ವಿಮಾನದ ಜೆಟ್ ಫ್ಯುಯೆಲ್ ಬಳಕೆ ಪ್ರಮಾಣ ೩೭.೭೦ ಲಕ್ಷ ಟನ್ ಗಳಷ್ಟಿದೆ. ೨೦೨೫ರ ಮೇ ತಿಂಗಳಲ್ಲಿ ಪೆಟ್ರೋಲ್ ಬಳಕೆ ಪ್ರಮಾಣ ೩೭.೭೦ ಲಕ್ಷ ಟನ್ ಗಳಷ್ಟಿದೆ. ೨೦೨೪ರ ಮೇ ತಿಂಗಳಿಗೆ ಹೋಲಿಸಿದರೆ ಪೆಟ್ರೋಲ್ ಬಳಕೆ ಪ್ರಮಾಣದಲ್ಲಿ ಶೇ.೯.೬೦ರಷ್ಟು ಹೆಚ್ಚಳವಾಗಿದೆ.
೨೦೨೫ರ ಮೇ ತಿಂಗಳಲ್ಲಿ ಡೀಸೆಲ್ ಬಳಕೆ ಪ್ರಮಾಣ ೮೫.೭೦ ಲಕ್ಷ ಟನ್ಗಳಷ್ಟಿದ್ದು, ೨೦೨೪ರ ಮೇ ಮಾಸಕ್ಕೆ ಹೋಲಿಸಿದರೆ ಡೀಸೆಲ್ ಬಳಕೆ ಪ್ರಮಾಣ ವರ್ಷದಲ್ಲಿ ಶೇ.೨.೧೦ರಷ್ಟು ಹೆಚ್ಚಳವಾಗಿದೆ. ಏರ್ ಟರ್ಬೈನ್ ಫ್ಯುಯೆಲ್ (ಎಟಿಎಫ್) ಬಳಕೆ ೨೦೨೫ರ ಮೇ ಮಾಸದಲ್ಲಿ ೭.೭೫ ಲಕ್ಷ ಟನ್ ಗಳಷ್ಟಿದ್ದು, ೨೦೨೪ರ ಮೇಗೆ ಹೋಲಿಸಿದರೆ ಶೇ.೪.೧೦ರಷ್ಟು ಏರಿಕೆಯಾಗಿದೆ.
ಅಡುಗೆ ಅನಿಲ(ಎಲ್ಪಿಜಿ) ಬಳಕೆಯೂ ೨೦೨೫ರ ಮೇ ಮಾಸದಲ್ಲಿ ೨.೧೩ ಕೋಟಿ ಟನ್ಗೂ ಅಧಿಕ ಪ್ರಮಾಣದಲ್ಲಿದೆ. ದೇಶದಲ್ಲಿನ ವಾಹನಗಳ ಸಂಖ್ಯೆ ಹೆಚ್ಚಳ, ಇಂಧನಗಳ ನಿತ್ಯದ ಬಳಕೆ ಪ್ರಮಾಣ ದಲ್ಲಿ ಹೆಚ್ಚಳ ಹಾಗೂ ಪರಿಷ್ಕರಿಸಿದ ತೈಲೋತ್ಪನ್ನಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡುವ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ ಕಚ್ಚಾತೈಲದ ಬಳಕೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.
*
ದೇಶದ ದಕ್ಷಿಣದ ಹಲವೆಡೆ ಇವೆ ಸುರಕ್ಷಿತ ಕಚ್ಚಾತೈಲ ಸಂಗ್ರಹಾಗಾರ
ದೇಶಾದ್ಯಂತ ಸರಕಾರಿ ಕಂಪನಿ ಕಚ್ಚಾತೈಲ ಶುದ್ಧೀಕರಣ ಘಟಕ ಸರಣಿ