ವಾಷಿಂಗ್ಟನ್:
ಕಳೆದ ಹಲವು ದಿನಗಳಿಂದ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಮಾತುಕತೆಗಳು ನಿರಂತರವಾಗಿ ನಡೆಯುತ್ತಿವೆ. ಬಹುನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದದ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶ್ವೇತಭವನದಿಂದ ಪತ್ರಗಳನ್ನು ಕಳುಹಿಸಲು ಪ್ರಾರಂಭಿಸುವುದಾಗಿ ಘೋಷಿಸಿದರು. ಈ ಪತ್ರಗಳು ಪ್ರತಿ ದೇಶಕ್ಕೂ ನಿಗದಿಪಡಿಸಿದ ಪರಸ್ಪರ ಸುಂಕ ದರದ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತವೆ.
ಈ ಪತ್ರದ ಮೂಲಕ ದೇಶಗಳು ಯಾವ ಸುಂಕಗಳನ್ನು ಪಾವತಿಸಲಿವೆ ಎಂಬುದನ್ನು ತಿಳಿಸುವುದು ನನ್ನ ಇಚ್ಛೆ. ನಮ್ಮಲ್ಲಿ 170ಕ್ಕೂ ಹೆಚ್ಚು ದೇಶಗಳಿವೆ. ನೀವು ಎಷ್ಟು ಒಪ್ಪಂದಗಳನ್ನು ಮಾಡಬಹುದು? ಎಂಬುದರ ಕುರಿತು ಮಾಹಿತಿ ನೀಡುವುದಾಗಿ ಹೇಳಿದರು. ನಾನು ಸರಳ ಒಪ್ಪಂದವನ್ನು ಹೊಂದಲು ಬಯಸುತ್ತೇನೆ. ನೀವು ಅದನ್ನು ನಿರ್ವಹಿಸಬಹುದು ಮತ್ತು ನಿಯಂತ್ರಿಸಬಹುದು. ನೀವು ಶೇಕಡಾ 20 ಅಥವಾ 30ರಷ್ಟು ಸುಂಕವನ್ನು ಪಾವತಿಸಲಿದ್ದೀರಿ. ನಾವು ಬಹುಶಃ ನಾಳೆಯಿಂದ ವಿವಿಧ ದೇಶಗಳಿಗೆ ಕೆಲವು ಪತ್ರಗಳನ್ನು ಕಳುಹಿಸುತ್ತೇವೆ. ಬಹುಶಃ ಪ್ರತಿದಿನ 10 ದೇಶಗಳಿಗೆ ಅಮೆರಿಕದೊಂದಿಗೆ ವ್ಯವಹಾರ ಮಾಡಲು ಅವರು ಏನು ಪಾವತಿಸಲಿದ್ದಾರೆ ಎಂದು ಅವರಿಗೆ ತಿಳಿಸುತ್ತೇವೆ. ಟ್ರಂಪ್ ವಿಯೆಟ್ನಾಂ ಮತ್ತು ಚೀನಾ ಸೇರಿದಂತೆ ಕೆಲವು ವ್ಯಾಪಾರ ಒಪ್ಪಂದಗಳನ್ನು ಘೋಷಿಸಿದ್ದಾರೆ.
ಕಳೆದ ತಿಂಗಳು ‘ಭಾರತಕ್ಕೆ ಬಾಗಿಲು ತೆರೆಯುವ’ ಒಪ್ಪಂದಕ್ಕೆ ‘ಸಹಿ ಹಾಕಬಹುದು’ ಎಂದು ಟ್ರಂಪ್ ಹೇಳಿದರು. ಥೈಲ್ಯಾಂಡ್ ಮೇಲೆ ಶೇ. 36 ಮತ್ತು ಇಂಡೋನೇಷ್ಯಾ ಮೇಲೆ ಶೇ. 32 ಸುಂಕ ಸೇರಿದಂತೆ ಹಲವಾರು ಏಷ್ಯಾದ ದೇಶಗಳ ಮೇಲೆ ಅಮೆರಿಕ ಭಾರೀ ಸುಂಕಗಳನ್ನು ಘೋಷಿಸಿತ್ತು. ಜಪಾನ್ ಮೇಲೆ ಶೇ. 24ರಷ್ಟು ಸುಂಕವನ್ನು ಘೋಷಿಸಿದ್ದಾರೆ. ದಕ್ಷಿಣ ಕೊರಿಯಾದ ಮೇಲೆ ಶೇ. 25, ಮಲೇಷ್ಯಾ ಮೇಲೆ ಶೇ. 24 ಮತ್ತು ಯುರೋಪಿಯನ್ ಒಕ್ಕೂಟದ ಮೇಲೆ ಶೇ. 20 ರಷ್ಟು ಪರಸ್ಪರ ಸುಂಕಗಳನ್ನು ವಿಧಿಸಲಾಯಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರಮುಖ ಚಿಪ್ ಉತ್ಪಾದನಾ ಕೇಂದ್ರವಾದ ತೈವಾನ್ ಮೇಲೆ ಶೇ. 32ರಷ್ಟು ಸುಂಕವನ್ನು ಟ್ರಂಪ್ ಘೋಷಿಸಿದರು.