ಬೆಂಗಳೂರು:
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಿರಂತರ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಸಭಾಂಗಣದಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳ ಜತೆ ಶುಕ್ರವಾರ ಸಭೆ ನಡೆಸಿದರು. ಈ ವೇಳೆ ಮಾತನಾಡಿನ ಸಿಎಂ, ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು 10 ದಿನಗಳ ಕಾಲಾವಕಾಶ ಅಗತ್ಯವಿದೆ. ಈ ಕಾಲಾವಧಿಯಲ್ಲಿ ಸರ್ಕಾರಕ್ಕೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವುದಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನು ತೊಡಕುಗಳಿದ್ದು, ಅದನ್ನು ಸರಿಪಡಿಸಿಕೊಳ್ಳುವ ಸಲಹೆಯನ್ನು ಕಾನೂನು ತಜ್ಞರು ನೀಡಿದ್ದಾರೆ. ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಅಂತಿಮ ನೋಟಿಫಿಕೇಶನ್ ಅಗಿರುವ ಕಾರಣ ಅದರ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 10 ದಿನಗಳ ಕಾಲಾವಕಾಶ ಅಗತ್ಯವಿದೆ. ಈ ಕಾಲಾವಧಿಯಲ್ಲಿ ಸರ್ಕಾರಕ್ಕೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಕಾನೂನು ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ನಿಯಮಾನುಸಾರ ಅಂತಿಮ ನೋಟಿಫಿಕೇಶ್ ಆಗಿರುವ ಕಾರಣ, ಅದರ ಕಾನೂನು ಅಂಶಗಳನ್ನು ಪರಿಶೀಲಿಸುವ ಅಗತ್ಯವಿದೆ. ಈ ಕುರಿತು ನಿನ್ನೆ ಪೂರ್ವಭಾವಿ ಸಭೆ ನಡೆಸಿದ್ದೇವೆ. ಇಂದೇ ಸರ್ಕಾರದ ನಿಲುವು ಪ್ರಕಟಿಸಲು ಸಾಧ್ಯವಿಲ್ಲ. ಕಾನೂನು ಸಮಸ್ಯೆ ನಿವಾರಿಸಲು ಸರ್ಕಾರಕ್ಕೆ ಹತ್ತು ದಿನಗಳ ಕಾಲಾವಾಕಾಶ ಬೇಕಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಂಡು ಜುಲೈ 15 ರಂದು ರೈತ ಹೋರಾಟಗಾರರೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ನಾವು ಪ್ರಜಾಪ್ರಭುತ್ವದಲ್ಲಿ ಮತ್ತು ಸಂವಾದದಲ್ಲಿ ನಂಬಿಕೆಯಿರುವವರು. ಪ್ರತಿಭಟನೆಗೆ ಯಾವುದೇ ಅಡ್ಡಿಪಡಿಸಿಲ್ಲ. ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರ ಮಾಡಿಲ್ಲ. ನಾನೂ ರೈತ ಸಂಘದಲ್ಲಿದ್ದವನು ಎಂದು ಹೇಳಿದ್ದಾರೆ.ಸಚಿವರಾದ ಕೆ.ಎಚ್.ಮುನಿಯಪ್ಪ, ಭೈರತಿ ಸುರೇಶ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಪೊನ್ನಣ್ಣ, ಚಿತ್ರನಟ ಪ್ರಕಾಶ್ ರಾಜ್ ಸೇರಿದಂತೆ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.