ಬೆಂಗಳೂರು:
ಹುಬ್ಬಳ್ಳಿಯ ಮಾಡೆಲ್ ಕಮ್ ಕಂಟೆಂಟ್ ಕ್ರಿಯೇಟರ್’ವೊಬ್ಬರ ಮೇಲೆ ಸೀ ಬರ್ಡ್ ಬಸ್ ಸಿಬ್ಬಂದಿಗಳು ಹಲ್ಲೆ ನಡೆಸಿದ ಘಟನೆ ನಗರದ ಆನಂದ್ ರಾವ್ ಸರ್ಕಲ್ನಲ್ಲಿ ನಡೆದಿದೆ.
ಹುಬ್ಬಳ್ಳಿಯ ದೇಶಪಾಂಡೆನಗರದ ಧ್ರುವ ನಿತೀಶ್ ನಾಯಕ್ (23) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಮಾಡೆಲ್ ಆಗಿರುವ ಧ್ರುವ್ ನಾಯಕ್ ಅವರು, ಬ್ಯಾಂಕಾಕ್ಗೆ ಹೋಗಿ ಜುಲೈ 1 ರಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ದರು. ಬಳಿಕ ಖಾಸಗಿ ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಅವರು, ರಾತ್ರಿ 11.30ಕ್ಕೆ ಬೆಂಗಳೂರಿನಿಂದ ತಮ್ಮೂರು ಹುಬ್ಬಳ್ಳಿಗೆ ಹೋಗಲು ಸೀ ಬರ್ಡ್ ಬಸ್ ಬುಕ್ ಮಾಡಿದ್ದಾರೆ.
ಬಳಿಕ ಸ್ನೇಹಿತರ ಜೊತೆಗೆ ಬಸ್ ಹತ್ತಲು ಆನಂದ್ ರಾವ್ ಸರ್ಕಲ್ ಬಳಿಗೆ ಬಂದಿದ್ದಾರೆ. ಬಸ್ ಹತ್ತಿದ ಕೆಲ ನಿಮಿಷಗಳ ಬಳಿಕ ಓರ್ವ ಸ್ನೇಹಿತನ ಜೊತೆಗೆ ಕೆಳ ನಿಂತು ಸಿಗರೇಟ್ ಸೇದಿದ್ದಾರೆ. ಈ ವೇಳ್ ಬಸ್ ಬಾಗಿಲು ಬಂದ್ ಮಾಡಿದ ಚಾಲಕ ಬಸ್ ನಿಧಾನವಾಗಿ ವಾಹನವನ್ನು ಮೂವ್ ಮಾಡಿದ್ದಾನೆ. ಈ ವೇಳೆ ಧ್ರುವ್ ಕೈ ಅಡ್ಡಗಟ್ಟಿ ನಾನು ಬರೋದಿದೆ ಬಸ್ ನಿಲ್ಲಿಸಿ ಎಂದಿದ್ದಾರೆ. ಈ ವೇಳೆ ಬಸ್ ಸಿಬ್ಬಂದಿ ಹಾಗೂ ಧ್ರುವ್ ನಾಯ್ಕ್ ಮಧ್ಯೆ ಗಲಾಟೆ ನಡೆದಿದ್ದು, ಮಾತಿನ ಚಕಮಕಿ ವೇಳೆ ಸಿಬ್ಬಂದಿಗಳು ಧ್ರುವ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ 11.40 ರಿಂದ ರಾತ್ರಿ 11.50 ರ ನಡುವೆ ಘಟನೆ ನಡೆದಿತ್ತು. ಬಸ್’ನ ಮೂವರು ಸಿಬ್ಬಂದಿಗಳು ನನ್ನ ಮೇಲೆ ಹಲ್ಲೆ ನಡೆಸಿದರು. ತೀವ್ರವಾಗಿ ಥಳಿಸಿದರು. ಧೂಮಪಾನ ಮಾಡಲು ನಾನು ನನ್ನ ಸ್ನೇಹಿತನೊಂದಿಗೆ ಬಸ್ ಹೊರಗೆ ನಿಂತಿದ್ದೆ. ಇಬ್ಬರು ಸ್ನೇಹಿತರು ಬಸ್ ಒಳಗೆ ಇದ್ದರು. ನಾವು ಬಸ್ ಪಕ್ಕದಲ್ಲಿಯೇ ನಿಂತಿದ್ದರೂ ಚಾಲಕ ಬಸ್ ಚಲಾಯಿಸಿದ್ದ. ನಾವು ಹಿಂದೆಯೇ ಓಡಿದ್ದೆವು. ಒಳಗಿದ್ದ ನನ್ನ ಸ್ನೇಹಿತರು ಬಸ್ ನಿಲ್ಲಿಸುವಂತೆ ಕೇಳಿದ್ದರೂ, ಬಸ್ ನಿಲ್ಲಿಸಿಲ್ಲ. ಅವರನ್ನೂ ಹೊರಗೆ ಬರಲೂ ಬಿಟ್ಟಿಲ್ಲ. ದೇಹದ ತುಂಬೆಲ್ಲಾ ಗಾಯಗಳಿವೆ. ತಲೆಗೂ ಪೆಟ್ಟಾಗಿದೆ. ಹಲ್ಲೆ ಬಳಿಕ ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆ ಎಂದು ಧ್ರುವ್ ಅವರು ಹೇಳಿದ್ದಾರೆ.
ಇದೇ ವೇಳೆ ಧ್ರುವ್ ಅವರು ತಮ್ಮ ಬೆಲೆಬಾಳುವ ವಸ್ತುಗಳನ್ನು ಸಿಬ್ಬಂದಿ ಕದ್ದಿದ್ದಾರೆಂದೂ ಆರೋಪಿಸಿದ್ದಾರೆ. ದುಬಾರಿ ಬೆಲೆಯ ಶೂ, ಇಯರ್ ಬರ್ಡ್ಸ್, 44 ಸಾವಿರ ರೂ ಬೆಲೆ ಸನ್ ಗ್ಲಾಸ್, 1.85 ಲಕ್ಷ ರೂ ಬೆಲೆಯ ಪ್ಲಾಟಿನಂ ಪೆಂಡೆಂಟ್ ಇರುವ ಸಿಲ್ವರ್ ಚೈನ್, ಪಾಸ್ ಪೋರ್ಟ್, 45 ಸಾವಿರ ರೂ ಬೆಲೆಯ ವಾಚ್, 40 ಸಾವಿರ ರೂ ಮೌಲ್ಯದ ಪ್ಲಾಟಿನಂ ರಿಂಗ್ ಸೇರಿದಂತೆ ಪರ್ಸ್ನಲ್ಲಿದ್ದ 10 ಸಾವಿರ ರೂ ಹಣ ಕದ್ದಿದ್ದಾರೆಂದು ಧ್ರುವ್ ನಾಯ್ಕ್ ಆರೋಪಿಸಿದ್ದಾರೆ.