ಜೈಪುರ:
ವಿದ್ಯುತ್ ಬಿಲ್ ಪಾವತಿ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಯಾರಿಗೂ ವಿಶೇಷ ಸವಲತ್ತು ನೀಡಲ್ಲ ಎಂದು ರಾಜಸ್ಥಾನದ ಇಂಧನ ಸಚಿವ ಹೀರಾಲಾಲ್ ನಗರ್ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಮುಖ್ಯಸ್ಥ ಮತ್ತು ನಾಗೌರ್ ಸಂಸದ ಹನುಮಾನ್ ಬೆನಿವಾಲ್ ಅವರ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಒಂದೇ ನಿಯಮ ಅನ್ವಯವಾಗುತ್ತದೆ ಎಂದಿದ್ದಾರೆ. ವಿದ್ಯುತ್ ಬಿಲ್ ಬಾಕಿ ಪಾವತಿ ವಿಚಾರದಲ್ಲಿ ವಿಐಪಿ ಆಗಿರಲಿ ಅಥವಾ ಸಾಮಾನ್ಯ ಜನರಾಗಿರಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಬಾಕಿ ಬಿಲ್ನಿಂದಾಗಿ ಬೆನಿವಾಲ್ ಅವರ ನಿವಾಸಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದು ರಾಜಸ್ಥಾನದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕೋಟಾಗೆ ಇತ್ತೀಚೆಗ ಭೇಟಿ ನೀಡಿದ್ದ ಸಚಿವ ನಗರ್, ಬಿಲ್ ಪಾವತಿ ಮಾಡದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ತಿಳಿಸಿದರು. ಈ ವಿಷಯದಲ್ಲಿ ಯಾರಿಗೂ ವಿಐಪಿ ಗೌರವ ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಸಂಸದ, ಶಾಸಕ ಅಥವಾ ಸಾಮಾನ್ಯ ನಾಗರಿಕರಾಗಿರಲಿ, ಎಲ್ಲರಿಗೂ ಒಂದೇ ನಿಯಮ ಎಂದು ಒತ್ತಿ ಹೇಳಿದ ನಗರ್, ಚುನಾಯಿತ ಪ್ರತಿನಿಧಿಗಳು ಬಿಲ್ಗಳನ್ನು ಸಕಾಲದಲ್ಲಿ ಪಾವತಿಸಿ ಜನರಿಗೆ ಮಾದರಿಯಾಗಬೇಕು ಎಂದು ಮನವಿ ಮಾಡಿದರು. “ಜನರು ತಮ್ಮ ಪ್ರತಿನಿಧಿಗಳ ವರ್ತನೆಯನ್ನು ಗಮನಿಸುತ್ತಾರೆ. ಬಿಲ್ ಪಾವತಿಸದಿರುವ ಕೆಟ್ಟ ಅಭ್ಯಾಸವನ್ನು ಕೈಬಿಡಬೇಕು” ಎಂದು ಅವರು ಹೇಳಿದರು. ವಿದ್ಯುತ್ ಕಳ್ಳತನ ಮತ್ತು ಬಾಕಿ ಬಿಲ್ಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದರು. ರಾಜಕೀಯ ಒತ್ತಡವಿಲ್ಲದೆ, ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಬೆನಿವಾಲ್ ಅವರ ಸಹೋದರ ಪ್ರೇಮ್ಸುಖ್ ಬೆನಿವಾಲ್ ಹೆಸರಿನಲ್ಲಿ ನೋಂದಾಯಿತವಾಗಿದ್ದ ವಿದ್ಯುತ್ ಸಂಪರ್ಕವನ್ನು ಜುಲೈ 2ರಂದು ಅಜ್ಮೇರ್ ವಿದ್ಯುತ್ ವಿತರಣ ನಿಗಮವು ಕಡಿತಗೊಳಿಸಿತು. ಇದಕ್ಕೆ ಕಾರಣ 11.61 ಲಕ್ಷ ರೂ. ಬಾಕಿ. ಆದರೆ ಬೆನಿವಾಲ್ ಈ ಕ್ರಮವನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದರು. ತಾನು 2 ಲಕ್ಷ ರೂ. ಠೇವಣಿಯಾಗಿ ಪಾವತಿಸಿದ್ದೇನೆ ಎಂದು ಅವರು ತಿಳಿಸಿದರು.