ಮೈಸೂರು:
ಮೇಕೆದಾಟು ಯೋಜನೆ ಬಗ್ಗೆ ಸುಮ್ಮನೆ ಮಾತಿನಲ್ಲಿ ಕಾಲಹರಣ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ, ತಮಿಳುನಾಡಿನ ಸರ್ಕಾರವನ್ನು ಒಪ್ಪಿಸುವ ಶಕ್ತಿ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಮೈಸೂರಿನಲ್ಲಿ ಶನಿವಾರ ದಿಶಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ಇದ್ದರೆ ತಮಿಳುನಾಡಿನ ತನ್ನ ಮೈತ್ರಿ ಪಕ್ಷವನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ. ನಾನು ಐದೇ ನಿಮಿಷದಲ್ಲಿ ಈ ಯೋಜನೆಗೆ ಪ್ರಧಾನಮಂತ್ರಿಗಳ ಒಪ್ಪಿಗೆ ಕೊಡಿಸುತ್ತೇನೆ. ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ನನ್ನ ಈ ಮಾತಿಗೆ ನಾನು ಈಗಲೂ ಬದ್ಧವಾಗಿದೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ನವರಿಗೆ ಮಿತ್ರಪಕ್ಷದ ಮುಲಾಜು ಇದೆ. ಅವರಿಗೆ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಶಕ್ತಿ ಇಲ್ಲ. ಡಿಎಂಕೆ ಪಕ್ಷವನ್ನು ಎದುರು ಹಾಕಿಕೊಳ್ಳುವ ಅಥವಾ ಅವರನ್ನು ಧಿಕ್ಕರಿಸುವ ಶಕ್ತಿಯೂ ಇಲ್ಲ. ತಮಿಳುನಾಡು ಸರ್ಕಾರವನ್ನು ದೈರ್ಯವಾಗಿ ಧಿಕ್ಕರಿಸಿ ಮೇಕೆದಾಟು ಯೋಜನೆ ಕೈಗೆತ್ತಿಗೊಂಡದರೆ ಅದು ಸಾಧ್ಯ ಆಗುತ್ತದೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಕಾಂಗ್ರೆಸ್ ಕೈಯಲ್ಲಿ ಸಾಧ್ಯ ಆಗುವುದಿಲ್ಲ. ತಮಿಳುನಾಡು ಸರ್ಕಾರವನ್ನೇ ಒಪ್ಪಿಸದೆ ಮೇಕೆದಾಟು ಯೋಜನೆ ಕಚೇರಿ ತೆರೆದರೆ ಏನು ಪ್ರಯೋಜನ? ಮೇಕೆದಾಟು ಮಾಡುತ್ತೇವೆ ಎಂದು ಹೇಳಿದವರು ಕಾಂಗ್ರೆಸ್ನವರು, ನಾನಲ್ಲ. ಯೋಜನೆ ಮಾಡುತ್ತೇವೆ ಎಂದು ಹೇಳಿದವರು ಮಾಡಬೇಕು ತಾನೇ? ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದರಲ್ಲ, ಎರಡೂವರೆ ವರ್ಷದಿಂದ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾರೆ ಅಷ್ಟೇ. ಸುಮ್ಮನೆ ನನ್ನ ಮೇಲೆ ಜವಾಬ್ದಾರಿ ಹೊರಿಸಿದರೆ ನಾನು ಹೇಗೆ ಮಾಡಲು ಸಾಧ್ಯ? ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದವರಿಗೆ ಜನರ ಕೆಲಸ ಮಾಡುವುದು ಬಿಟ್ಟು ರಾಜಕೀಯ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಕಂಡರೆ ಭಯ. ನನ್ನೊಬ್ಬನ ಮೇಲೆಯೇ ಆ ಪಕ್ಷಕ್ಕೆ ಅತಿಯಾದ ಭಯವಿದೆ. ಈಗಾಗಿ ಪದೇ ಪದೇ ಕಾಂಗ್ರೆಸ್ ಮುಖಂಡರು ನನ್ನ ಹೆಸರನ್ನು ಜಪ ಮಾಡುತ್ತಿರುತ್ತಾರೆ. ಬಿಜೆಪಿ – ಜೆಡಿಎಸ್ ಜತೆಯಾದ ಮೇಲಂತೂ ಕಾಂಗ್ರೆಸ್ ನಾಯಕರಿಗೆ ನಿದ್ದೆಯೇ ಬರುತ್ತಿಲ್ಲ. ಈಗಾಗಿ ನನ್ನ ಮೇಲೆ ಪದೇ ಪದೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮುಂದೆ ಕೂಡ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ, ಸಂತೋಷ. ಮುಂದಿನ ಐದು ವರ್ಷ ಅಲ್ಲದಿದ್ದರೆ ಐವತ್ತು ವರ್ಷ ಅವರೇ ಆಳ್ವಿಕೆ ಮಾಡಲಿ. ಮೊದಲು ಜನರು ಹೇಳಿದ ಕೆಲಸ ಮಾಡಿ. ಇಪ್ಪತ್ತು ವರ್ಷ ನಮ್ಮದೇ ಸರ್ಕಾರ ಎಂದವರು ಏನೇನಾದರೂ ಎನ್ನುವುದು ನನಗೆ ಗೊತ್ತಿದೆ. ಮುಂದೆ ಯಾರದ್ದು ಸರ್ಕಾರ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ನಲ್ಲಿ ಸಿಎಂ ಖುರ್ಚಿಗಾಗಿ ಗಲಾಟೆಗಳೇ ನಡೆಯುತ್ತಿದೆ. ಗಲಾಟೆಯಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷವನ್ನು ಜನ ಹೇಗೆ ಒಪ್ಪುತ್ತಾರೆ? ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಅವರು ಟೀಕಾಪ್ರಹಾರ ನಡೆಸಿದರು.
ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಸದನಾಗಿ ನಾನು ಎಷ್ಟು ಅನುದಾನ ತಂದಿದ್ದೇನೆ ಎಂಬ ಬಗ್ಗೆ ನನ್ನ ಬಗ್ಗೆ ಟೀಕೆ ಮಾಡಿರುವ ಸಚಿವ ಮಹಾಶಯರು ಮೊದಲು ಮಾಹಿತಿ ಪಡೆದುಕೊಂಡು ಮಾತಾಡಲಿ. ಕೇವಲ ಸಂಸದರ ಅನುದಾನ ತಂದಿದ್ದಾರೆ ಎಂದು ಅವರು ಹೇಳಿದ್ದಾರೆ. ನಾನು ಬರೀ ಸಂಸದರ ನಿಧಿಯಿಂದ ಹಣ ತಂದಿಲ್ಲ. ಬೇರೆ ಬೇರೆ ವಿಶೇಷ ಅನುದಾನಗಳನ್ನೇ ತಂದಿದ್ದೇನೆ. ಮಾಹಿತಿ ಇಲ್ಲದಿದ್ದರೆ ಮಾತನಾಡಬಾರದು.
ನಾನು ವಿವಿಧ ಬಾಬ್ತುಗಳಿಂದ ಎಷ್ಟು ಅನುದಾನ ತಂದಿದ್ದೇನೆ ಎಂಬುದನ್ನ ಮೊದಲು ಅವರು ತಿಳಿದುಕೊಳ್ಳಲಿ. ಸಂಸದರ ಅನುದಾನ ಅಲ್ಲದೆ ಸಿಎಸ್ಆರ್ ಮೂಲದಿಂದಲೂ ಅನುದಾನ ತಂದಿದ್ದೇನೆ ಎಂಬುದು ಮಂಡ್ಯ ಜನತೆಗೆ ಗೊತ್ತಿದೆ. ಸಚಿವರಾದವರಿಗೆ ಮಾಹಿತಿ ಇಲ್ಲದಿದ್ದರೆ ನಾನು ಏನು ಮಾಡಲು ಸಾಧ್ಯ? ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಕೇಂದ್ರ ಸಚಿವರು ತಿರುಗೇಟು ನೀಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಮೈಸೂರು ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷತೆಯನ್ನು ವಹಿಸಿದರು. ಸಭೆಯಲ್ಲಿ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್, ಶಾಸಕರಾದ ಜಿ.ಡಿ. ಹರೀಶ್ ಗೌಡ, ಶ್ರೀವತ್ಸ, ಮಾಜಿ ಶಾಸಕ ಹಾಗೂ ದಿಶಾ ಸಮಿತಿ ನಾಮನಿರ್ದೇಶಿತ ಸದಸ್ಯ ಅಶ್ವಿನ್ ಕುಮಾರ್, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್, ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿಸಿಪಿ ಸುಂದರರಾಜ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಕುರಿತು ಕಟುವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಸಂಘದ ಬಗ್ಗೆ ಮಾತನಾಡಿ ಬಾಯಿ ಚಪಲ ತೀರಿಸಿಕೊಳ್ಳುವ ಬದಲು 40 ವರ್ಷದಿಂದ ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದೇವೆ ಎಂಬುದನ್ನು ಮೊದಲು ಹೇಳಲಿ. ಆರ್ಎಸ್ಎಸ್ ಅನ್ನು ಬಂದ್ ಮಾಡುವುದಿರಲಿ, ಈಗ ಕಾಂಗ್ರೆಸ್ ಪಕ್ಷವೇ ಎಲ್ಲಾ ಕಡೆ ಬಂದ್ ಆಗುತ್ತಿದೆ. ಜನರೇ ಬಹುತೇಕ ಕಡೆ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡುತ್ತಿದ್ದಾರೆ. ಮೊದಲು ನಿಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಿ. ಪ್ರಿಯಾಂಕ್ ಖರ್ಗೆ ಅವರು ಬಾಯಿ ಚಪಲಕ್ಕೆ ಮೂಲ ವಿಚಾರಗಳನ್ನು ಮರೆ ಮಾಚಲು ಈ ರೀತಿ ಹೇಳಿಕೆ ಕೊಡ್ತಿದ್ದಾರೆ ಅಷ್ಟೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.