ಪಾಟ್ನಾ:
ಬಿಹಾರದ ಪ್ರಮುಖ ಉದ್ಯಮಿ ಮತ್ತು ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ಪಾಟ್ನಾದ ತಮ್ಮ ಮನೆಯ ಹೊರಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರು ವರ್ಷಗಳ ಹಿಂದೆ ಅವರ ಪುತ್ರ ಗುಂಜನ್ ಖೇಮ್ಕಾ ಅವರನ್ನು ಇದೇ ರೀತಿಯಲ್ಲಿ ಕೊಲೆ ಮಾಡಲಾಗಿತ್ತು. ಸದ್ಯ ಈ ಹತ್ಯೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಾಂಧಿ ಮೈದಾನ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್ ಪನಾಚೆ ಬಳಿಯ ಸೊಸೈಟಿಯೊಳಗಿರುವ ತಮ್ಮ ಮನೆಗೆ ರಾತ್ರಿ 11 ಗಂಟೆ ಸುಮಾರಿಗೆ ತೆರಳುತ್ತಿದ್ದ ಗೋಪಾಲ್ ಖೇಮ್ಕಾ ಮೇಲೆ ದಾಳಿ ನಡೆದಿದೆ. “ಜುಲೈ 4ರ ರಾತ್ರಿ 11 ಗಂಟೆ ಸುಮಾರಿಗೆ, ಗಾಂಧಿ ಮೈದಾನದ ದಕ್ಷಿಣ ಭಾಗದಲ್ಲಿ ಉದ್ಯಮಿ ಗೋಪಾಲ್ ಖೇಮ್ಕಾ ಗುಂಡಿನ ದಾಳಿಗೆ ಒಳಗಾಗಿ ಮೃತಪಟ್ಟಿರುವ ಮಾಹಿತಿ ಬಂದಿದೆ. ಅಪರಾಧ ಸ್ಥಳವನ್ನು ಸೀಲ್ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪಾಟ್ನಾ ಪೊಲೀಸ್ ಅಧೀಕ್ಷಕಿ ದೀಕ್ಷಾ ಕುಮಾರಿ ತಿಳಿಸಿದ್ದಾರೆ.
ʼಸ್ಥಳದಲ್ಲಿ ಒಂದು ಗುಂಡು ಮತ್ತು ಒಂದು ಶೆಲ್ ಪತ್ತೆಯಾಗಿದೆ” ಎಂದು ದಿಕ್ಷಾ ಹೇಳಿದ್ದು, ಖೇಮ್ಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆ 2018ರ ಡಿಸೆಂಬರ್ನಲ್ಲಿ ಗುಂಜನ್ ಖೇಮ್ಕಾ ಅವರನ್ನು ಹಾಜಿಪುರ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿ ಗೇಟ್ ಬಳಿ ಕೊಲೆ ಮಾಡಿದ ಘಟನೆಯನ್ನು ನೆನಪಿಸುತ್ತದೆ. ಇದೇ ವೇಳೆ, ಪೂರ್ಣಿಯಾದ ಸ್ವತಂತ್ರ ಸಂಸದ ಪಪ್ಪು ಯಾದವ್ (ರಾಜೇಶ್ ರಂಜನ್) ಘಟನಾಸ್ಥಳಕ್ಕೆ ಭೇಟಿ ನೀಡಿ, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ಟೀಕಿಸಿದ್ದಾರೆ.
“ಬಿಹಾರವು ಅಪರಾಧಿಗಳ ಆಶ್ರಯಸ್ಥಾನವಾಗಿದೆ ನಿತೀಶ್ ಅವರೆ, ದಯವಿಟ್ಟು ಬಿಹಾರವನ್ನು ಬಿಡಿ” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಗುಂಜನ್ನ ಕೊಲೆಯ ಸಂದರ್ಭದಲ್ಲಿ ಕಠಿಣ ಕ್ರಮ ಕೈಗೊಂಡಿದ್ದರೆ, “ಗೋಪಾಲ್ ಖೇಮ್ಕಾ ಇಂದು ಕೊಲೆಯಾಗುತ್ತಿರಲಿಲ್ಲ” ಎಂದು ಅವರು ಆರೋಪಿಸಿದ್ದಾರೆ. “ಏಳು ವರ್ಷಗಳ ಹಿಂದೆ ಗುಂಜನ್ ಕೊಲೆಯಾದಾಗ ನಾನು ನ್ಯಾಯ ಕೊಡಿಸುವ ಭರವಸೆ ನೀಡಲು ಭೇಟಿಯಾಗಿದ್ದೆ. ಆಗ ಸರ್ಕಾರ ಅಪರಾಧಿಗಳ ಜತೆ ನಿಲ್ಲದೆ ಕಠಿಣ ಕ್ರಮ ಕೈಗೊಂಡಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ” ಎಂದು ಅವರು ಹೇಳಿದ್ದಾರೆ.