ಹುಬ್ಬಳ್ಳಿ: ಸರ್ಕಾರ ಯಾರು ಹಸಿವೆಯಿಂದ ಇರಬಾರದೆಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಹೆಸರಿನಲ್ಲಿ ಉಚಿತವಾಗಿ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಆದರೆ ಕೆಲವು ಕಾಣದ ಕೈಗಳು ಮಾತ್ರ ಅನ್ನಭಾಗ್ಯದ ಅಕ್ಕಿಗೆ ಕಣ್ಣು ಹಾಕಿ, ಉದ್ಯಮ ನಡೆಸುತ್ತಿದ್ದಾರೆ. ಇದೀಗ ಇಂತಹ ದಂಧೆಕೋರರಿಗೆ ಸಿಸಿಬಿ ಪೋಲಿಸರು ಪಾಠ ಕಲಿಸಲು ಮುಂದಾಗಿದ್ದಾರೆ.
ಹೌದು, ಕಸಬಾಪೇಟೆ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದ ಹಾಗೇ ಸಿಸಿಬಿ ಪೋಲಿಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಅಬ್ದುಲ್ ಖಾದರ್ ಬಿಜಾಪುರ ಹಾಗೂ ನವಾಜ್ ಖಾನ್ ಕರಿನ್ ನನ್ನು ಗೂಡ್ಸ್ ಮಿನಿ ಅಶೋಕ ಲೇಲ್ಯಾಂಡ್ ವಾಹನವನ್ನು ಸಮೇತ ವಶಕ್ಕೆ ಪಡೆದಿದ್ದಾರೆ.
ಇನ್ನು ಈ ವಾಹನದಲ್ಲಿ ಸರಿಸುಮಾರು 2ಟನ್ ಅಕ್ಕಿ ಇತ್ತೆಂದು ಸಿಸಿಬಿ ಪೋಲಿಸರು ಮಾಹಿತಿ ನೀಡಿದ್ದು, ಸದ್ಯ ಈ ಘಟನಾ ಸಂಬಂಧ ಕಸಬಾಪೇಟೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆ ವೇಳೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ, ಅಲಿ ಶೇಕ್, ಸಿಬ್ಬಂದಿಗಳಾದ ಐ.ಕೆ.ಧಾರವಾಡ, ಮಾರುತಿ ಭಜಂತ್ರಿ, ಬಾಬಾಜಾನ್ ಲಂಗೋಟಿ, ಬಸವರಾಜ ಬೆಳಗಾವಿ, ಅನಿಲ್ ಹುಗ್ಗಿ ಹಾಗೂ ರಾಜು ಗುಂಜಾಲ್ ಇದ್ದರು.
ಇನ್ನು ಇದಷ್ಟೇ ಅಲ್ಲದೇ ನಗರದ ವಿವಿಧೆಡೆ ಅನ್ನಭಾಗ್ಯದ ಅಕ್ಕಿಯ ದಂಧೆಕೋರರು ಎಗ್ಗಿಲ್ಲದೇ ತಮ್ಮ ದಂಧೆ ನಡೆಸುತ್ತಿದ್ದು, ಸಿಸಿಬಿ ಪೋಲಿಸರು ಕಾರ್ಯಾಚರಣೆ ಮುಂದುವರೆಸಿ, ಅಕ್ರಮ ಅಕ್ಕಿ ಮಾರಾಟಕ್ಕೆ ಬ್ರೇಕ್ ಹಾಕಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.