ಹುಬ್ಬಳ್ಳಿ; ನಗರದ ಹೊರವಲಯದ ತಾರಿಹಾಳದ ಲೋಟಸ್ ಬಾರ್ ಹತ್ತಿರವಿರುವ ಚಿಕ್ಕು ತೋಟದಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಇರುವುದನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಕೊಲೆಯ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣನವರ್ ಹಾಗೂ ಅವರ ತಂಡದವರು ತನಿಖೆ ಕೈಗೊಂಡು ಕೇವಲ 24 ಘಂಟೆಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ ಮೂವರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಏ.7 ರಂದು ರಾತ್ರಿ ವೇಳೆಯಲ್ಲಿ ಸರಾಯಿ ಕುಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಷಣ್ಮುಖಪ್ಪ ಹಡಪದ ಎಂಬಾತನನ್ನು ಪ್ರವೀಣ್ ಕುಬಿಹಾಳ (25), ಹನುಮಂತ ಮಾಳಗಿಮನಿ (25) ಹಾಗೂ ಸಹದೇವ ನೂಲ್ವಿ (24) ಆರೋಪಿಗಳೆ ಬೀಯರ್ ಬಾಟಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಮತ ನಾಲ್ಕು ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಧಾರವಾಡ ಪೊಲೀಸ ಅಧೀಕ್ಷಕರು ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಎಸ್.ಪಿ. ಎನ್.ವಿ.ಭರಮನಿ, ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ಡಿ.ಎಸ್.ಪಿ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ, ಪಿಎಸ್ಐ ಸಚಿನ ಅಲಮೇಲಕರ, ಪಿಎಸ್ಐ ಅಭಿಜಿತ್, ಎ.ಎಸ್.ಐ ಎನ್.ಎಮ್.ಹೊನ್ನಪ್ಪನವರ, ನಾರಾಯಣ ಹಿರೇಹೊಳ್ಳಿ ಹಾಗೂ ಸಿಬ್ಬಂದಿಗಳಾದ ಎ.ಎ.ಕಾಕರ, ಚನ್ನಪ್ಪ ಬಳ್ಳೊಳ್ಳಿ, ಸಿ.ಬಿ.ಜನಗಣ್ಣವರ, ನಾಗಪ್ಪ ಸಂಶಿ, ವಾಯ್.ಡಿ.ಕುಂಬಾರ, ನಾಗಯ ಮಾಣಿಕ, ಪ್ರೇಮನಾಥ ಹಾಗೂ ತಾಂತ್ರಿಕ ಸಿಬ್ಬಂದಿಯವರಾದ ಆರೀಫ್ ಗೋಲಂದಾಜ, ವಿಠ್ಠಲ ಇವರನ್ನು ಒಳಗೊಂಡ ತನಿಖೆ ತಂಡದ ಸದಸ್ಯರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣವನ್ನು ಬೆಳಕಿಗೆ ತಂದ ವಿಶೇಷ ತನಿಖಾ ತಂಡಕ್ಕೆ ಹಿರಿಯ ಅಧಿಕಾರಿಗಳು ಬಹುಮಾನ ಘೋಷಣೆ ಮಾಡಿದ್ದಾರೆ.