ಧಾರವಾಡ ಸಂಚಾರಿ ಠಾಣೆಯ ಪೊಲೀಸರು ನಗರದ ಜನತೆ ಮೆಚ್ಚುವಂತಹ ಹಾಗೂ ಶ್ಲಾಘನೆ ವ್ಯಕ್ತಪಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ನಿತ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ ಕೆಲ ಯುವಕರ ಬೈಕ್ಗಳಲ್ಲಿನ ಸೈಲೆನ್ಸರ್ಗಳನ್ನು ವಶಕ್ಕೆ ಪಡೆದು ನಾಶ ಮಾಡಿದ್ದಾರೆ.
ಧಾರವಾಡ ಸಂಚಾರಿ ಠಾಣೆಯ ಪೊಲೀಸರಿಂದ ಡಿಫೆಕ್ಟಿವ್ ಸೈಲೆನ್ಸರ್ ಕಾರ್ಯಾಚರಣೆ ತುಂಬಾ ಜೋರಾಗಿ ಮುಂದುವರೆದಿದೆ. ಕರ್ಕಶ ಶಬ್ದ ಮಾಡುವ ಸೈಲೆನ್ಸರ್ಗಳನ್ನು ಕಿತ್ತು ಹಾಕಿಸಿ, ರೋಡ್ ರೋಲರ್ ಹತ್ತಿಸುವ ಮೂಲಕ 200 ಕ್ಕೂ ಹೆಚ್ಚು ಸೈಲೆನ್ಸರ್ಗಳನ್ನು ನಾಶ ಮಾಡಿದ್ದಾರೆ.
ಇತ್ತೀಚಿಗೆ ನಗರದಲ್ಲಿ ಕರ್ಕಶ ಶಬ್ದವನ್ನುಂಟು ಮಾಡುವ ಬೈಕುಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದವು. ಈ ಬಗ್ಗೆ ಸಾರ್ವಜನಿಕರು ಹಾಗೂ ಕೆಲ ಪ್ರಜ್ಞಾವಂತರು ಪೊಲೀಸರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಎಚ್ಚೆತ್ತ ಪೊಲೀಸರು ದಿಟ್ಟ ಕ್ರಮ ಜರುಗಿಸಿದ್ದಾರೆ. ಡಿಫೆಕ್ಟಿವ್ ಸೈಲೆನ್ಸರ್ ಅಳವಡಿಸದಂತೆ ವಾರ್ನಿಂಗ್ ಕೂಡ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ಈ ರೀತಿಯ ಸೈಲೆನ್ಸರ್ ಅಳವಡಿಸಿ ರಸ್ತೆಗೆ ಇಳಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಹಾಗೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ರೈಂ ಡಿಸಿಪಿ ಸಿ.ಆರ್ ರವೀಶ್, ಕಾನೂನು ಸುವ್ಯವಸ್ಥೆ ಡಿಸಿಪಿ ಕುಶಾಲ್ ಚೌಕ್ಸೆ ಹಾಗು ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಶ್ರೀನಿವಾಸ್ ಮೇಟಿ ಉಪಸ್ತಿತರಿದ್ದರು.