ಹುಬ್ಬಳ್ಳಿ: ನಗರದಲ್ಲಿ ಸ್ಕೂಟಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತಿದ್ದ ಖತರ್ನಾಕ್ ಕಳ್ಳಿಯನ್ನು ಬಂಧನ ಮಾಡುವಲ್ಲಿ ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ನಿಲ್ಲಿಸಿದ ಸ್ಕೂಟಿ ವಾಹನಗಳನ್ನು ತನ್ನ ಚಾಲಾಕಿತನದಿಂದ ಎಗರಿಸಿ ಫೈನಾನ್ಸರಗಳ ಹತ್ತಿರ ಹೋಗಿ ಇದು ನನ್ನ ಪರಿಚಯಿಸ್ಥರ ಸ್ಕೂಟಿ ಅವರಿಗೆ ಹಣದ ಅವಶ್ಯಕತೆ ಇದೆ ಇದನ್ನು ಗಿರವಿ ಇಟ್ಟುಕೊಂಡು ಹಣವನ್ನೂ ಕೊಡಿ ಎಂದು ಹಣ ಪಡೆಯುತ್ತಿದ್ದಳು.
ನಗರದ ಆರ್ ಜಿ ಎಸ್ ನಿವಾಸಿ ರೇಷ್ಮಾ ಗುಡಗೇರಿ ಬಂಧಿತ ಆರೋಪಿಯಾಗಿದ್ದು ಬಂಧಿತಳಿಂದ ಸುಮಾರು ಹತ್ತು ಲಕ್ಷ ಕಿಮ್ಮತ್ತಿನ ಹತ್ತು ಸ್ಕೂಟಿ ಹಾಗೂ ಎರಡು ಮೋಟಾರ್ ಸೈಕಲ್ ಸೇರಿ ಒಟ್ಟು 12 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
*ಬಂಧಿತ ಖತರ್ನಾಕ್ ಕಳ್ಳಿಯ ಕರಾಮತ್ತು ಬಹಿರಂಗ*
ಈಕೆ ಕಳ್ಳತನಕ್ಕೆ ತನ್ನ ಐದು ವರ್ಷದ ಮಗುವನ್ನು ಬಳಸಿಕೊಂಡು ಕಳ್ಳತನ ಮಾಡುತ್ತಿದ್ದಳು. ಅದು ಹೇಗೆ ಅನ್ನೋದಾದ್ರೆ ತಾನು ಕಳ್ಳತನ ಎಸೆಗುವ ಸ್ಕೂಟಿ ಮೇಲೆ ಮಗು ಇದ್ದರೆ ಈಕೆಯ ಮೇಲೆ ಯಾರಿಗೂ ಅನುಮಾನ ಬರುವುದಿಲ್ಲ ಅನ್ನೋ ಕಾರಣಕ್ಕೆ ಕಳ್ಳತನವನ್ನು ಸಲೀಸಾಗಿ ಮಾಡುತ್ತಿದ್ದಳು. ಅಲ್ಲದೆ ಈಕೆಯ ಹತ್ತಿರ ಒಂದು ಮಾಸ್ಟರ್ ಕೀ ಇದ್ದುದರಿಂದ ಇದನ್ನೇ ಅಸ್ತ್ರ ಮಾಡಿಕೊಂಡು, ತನ್ನ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ಧಾರವಾಡ, ಕೇಶ್ವಾಪುರ, ವಿದ್ಯಾನಗರ ಪ್ರದೇಶಗಳಲ್ಲಿ ಸ್ಕೂಟಿ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದಳು.
ದಿನನಿತ್ಯ 5 ರಿಂದ 6 ಕಿಲೋಮೀಟರ್ ನಷ್ಟು ತನ್ನ ಮಗುವಿನ ಜೊತೆ ಕಾಲ್ನಡಿಗೆಯಲ್ಲಿ ಓಡಾಡಿಕೊಂಡು ಕದ್ದ ದ್ವಿಚಕ್ರ ವಾಹನಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳದಲ್ಲಿ ಇಟ್ಟು, ವಾಹನ ಮಾಲಿಕ ಅದನ್ನು ಹುಡುಕಿಕೊಂಡು ಬರಬಹುದಾ ಅಥವಾ ಪೋಲಿಸ್ ಠಾಣೆಗೆ ದೂರು ಕೊಟ್ಟು ತನ್ನ ವಾಹನ ಹುಡುಕ ಬಹುದೆಂದು ಕಾದು ನೋಡುತ್ತಿದ್ದಳು. ಎರಡು-ಮೂರು ದಿನ ಇದನ್ನು ಗಮನಿಸಿ ತದನಂತರ ತಾನು ಕದ್ದ ವಾಹನವನ್ನು ತೆಗೆದುಕೊಂಡು ಅದನ್ನು ಸುರಕ್ಷಿತ ಸ್ಥಳದಲ್ಲಿ ಇರಿಸುತ್ತಿದ್ದಳು.
*ಈಕೆಯ ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ*
*ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದ ಪ್ರಕರಣ*
ಸುಮಾರು ಒಂದು ವರ್ಷದಿಂದ ಹುಬ್ಬಳ್ಳಿ ಧಾರವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳ್ಳತನದ ಪ್ರಕರಣಗಳು ದಾಖಲಾಗಿದ್ದು, ಇವುಗಳನ್ನು ಯಾರು ಕದ್ದಿದ್ದಾರೆಂಬ ಮಾಹಿತಿ ಮಾತ್ರ ನಿಗೋಡವಾಗಿತ್ತು.
ಈ ಪ್ರಕರಣವನ್ನು ಬೆನ್ನತ್ತಿದ ಉತ್ತರ ವಿಭಾಗೀಯ ಇಂಟಲಿಜೆಂಟ್ ಎಸಿಪಿ ಶಿವಪ್ರಕಾಶ್ ನಾಯ್ಕ, ವಿದ್ಯಾನಗರ ಪೋಲಿಸ್ ಠಾಣೆಯ ಸಾರತಿ ಜಯಂತ್ ಗೌಳಿ, ಜೋಡೆತ್ತು ಎಂದೆ ಖ್ಯಾತಿ ಪಡೆದ ಪಿಎಸ್ಐಗಳಾದ ಬಿ.ಎನ್ ಸಾತಣ್ಣವರ್ ಹಾಗೂ ಶ್ರೀಮಂತ ಹುಣಸಿಕಟ್ಟಿ ಜೊತೆಗೆ ಸೂಪರ್ ಕಾಪ್ಸ್ ಎಂದೇ ಪ್ರಸಿದ್ದಿ ಪಡೆದ ಕ್ರೈಂ ಸಿಬ್ಬಂದಿಗಳಾದ ಶಿವಾನಂದ.ಎಮ್.ತಿರಕಣ್ಣವರ, ಮಲ್ಲಕಾರ್ಜುನ ಧನಿಗೊಂಡ, ಪರುಶರಾಮ ಹಿರಗಣ್ಣವರ, ಸಯ್ಯದಅಲಿ ತಹಶೀಲ್ದಾರ, ಶರಣಗೌಡ ಮೂಲಿಮನಿ, ಅನಿಲ್ ಹುಗ್ಗಿ ಹಾಗೂ ರಾಜು ಗುಂಜಾಲ್ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡ ತಮ್ಮ ಅತ್ಯುನ್ನತ ಬುದ್ಧಿವಂತಿಕೆಯನ್ನು ಉಪಯೋಗಿಸಿ ದ್ವಿಚಕ್ರ ವಾಹನ ಕಳ್ಳರಾದ ರೇಷ್ಮಾ ಗುಡಗೇರಿ, ಆಸ್ಮಾ ಮುಲ್ಲಾ, ರವಿ ಬನ್ಸೂಡೇ, ಮುಬಾರಕ್ ಭಾಗವನ್ ಹಾಗೂ ದಸ್ತಗೀರ ಧಾರವಾಡ ಎಂಬುವರನ್ನು ಬಂಧನ ಮಾಡಿದ್ದಾರೆ.
ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಬೇದಿಸಿದ ವಿದ್ಯಾನಗರ ಪೋಲಿಸರ ಕಾರ್ಯವೈಖರಿಯನ್ನು ಪೋಲಿಸ್ ಆಯುಕ್ತ ಎನ್ ಶಶಿಕುಮಾರ್, ಡಿಸಿಪಿಗಳಾದ ಮಹಾನಿಂಗಪ್ಪಾ ನಂದಗಾವಿ, ಆರ್ ರವೀಶ್ ಅವರು ಶ್ಲಾಘಿಸಿದ್ದಾರೆ.