ಹುಬ್ಬಳ್ಳಿ: ನಗರದ ಹೊರವಲಯದ ಒಂಟಿ ಮನೆಗಳನ್ನೆ ಟಾರ್ಗೆಟ್ ಮಾಡಿ ಮನೆಗಳನ್ನು ದರೋಡೆ ಮಾಡುತ್ತಿದ್ದ ಖತರ್ನಾಕ್ \”ಗಾಯಿ ಪರೀದಿ ಗ್ಯಾಂಗ್\”ನ ಓರ್ವ ಸದಸ್ಯನನ್ನು ಹುಬ್ಬಳ್ಳಿಯ ಗೋಕುಲರಸ್ತೆ ಪೊಲೀಸ್ ಠಾಣೆಯ ಪೊಲೀಸರು ಪೈರಿಂಗ್ ಮಾಡಿ ಬಂಧಿಸಿದ್ದಾರೆ.
ಮಹೇಶ ಸೀತಾರಾಮ ಕಾಳೆ ಬಂಧಿತ ದರೋಡೆಕೋರನ್ನಾಗಿದ್ದು, ಈತ ಐದಾರು ಜನ ಸಹಚರರ ಜೊತೆಗೂಡಿ ಗೋಕುಲರಸ್ತೆಯಲ್ಲಿ ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆ ದರೋಡೆಗೆ ಯತ್ನಿಸಿದ್ದಾರೆ.
ಈ ವೇಳೆ ಅಕ್ಕಪಕ್ಕದ ಮನೆಯ ನಿವಾಸಿಗಳು ಎಚ್ಚರಗೊಂಡ ಹಿನ್ನೆಲೆಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಚೆಕ್ ಪೋಸ್ಟ್\’ನಲ್ಲಿ ತಪಾಸಣೆಯಲ್ಲಿದ್ದ ಗೋಕುಲರಸ್ತೆಯ ಪೊಲೀಸರು ಅನುಮಾನ್ಪದವಾಗಿ ಬೈಕ್\’ನಲ್ಲಿ ಬಂದ ಸೀತಾರಾಮ ಕಾಳೆಯನ್ನು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ.
ಈ ವೇಳೆ ಮನೆ ದರೋಡೆಗೆ ಯತ್ನಿಸಿದ ವಿಷಯ ಗೊತ್ತಾಗಿದೆ. ಅಷ್ಟೇ ಅಲ್ಲದೇ ಇನ್ನಿತರರು ರೇವಡಿಹಾಳ ಬ್ರಿಡ್ಜ್ ಬಳಿಯಲ್ಲಿ ಇರುವುದಾಗಿ ತಿಳಿಸಿದ್ದಾನೆ. ಹೀಗಾಗಿ ಗೋಕುಲರಸ್ತೆಯ ಪೊಲೀಸ್ ಠಾಣೆಯ ಪಿಐ ಪ್ರವೀಣ ನೀಲಮ್ಮನವರ ಆದೇಶದ ಮೇರೆಗೆ ಪಿಎಸ್ಐ ಸಚಿನ್ ದಾಸರಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಈ ವೇಳೆ ಉಳಿದವರ ಬಂಧನಕ್ಕೆ ಮುಂದಾದಾಗ ಆರೋಪಿ ಮಹೇಶ್ ಕಾಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಪಿಎಸ್ಐ ಸಚಿನ್ ದಾಸರಡ್ಡಿ ಅವರ ಸಮಯೋಚಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೆಟ್ಟು ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಪಿಎಸ್ಐ ಸಚಿನ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಷ್ಟೇ ಅಲ್ಲದೇ ಹೆಡ್ ಕಾನ್ಸಟೇಬಲ್ ವಸಂತ ಗುಡಗೇರಿ ಅವರಿಗೂ ಗಾಯಗಳಾಗಿವೆ. ಬಳಿಕ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಕುರಿತು ಗೋಕುಲರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಮ್ಸ್\’ಗೆ ಭೇಟಿ ನೀಡಿದ ಕಮಿಷನರ್ ಎನ್.ಶಶಿಕುಮಾರ್;
ಪ್ರಕರಣ ವಿಷಯ ತಿಳಿಯುತ್ತಿದ್ದಂತೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರಕರಣದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರಾಜ್ಯಯಲ್ಲಿ ದಖಾಯತಿ ನಡೆಸಿರುವ ಗಾಯಿ ಪರೀದಿ ಎಂಬ ಖತರ್ನಾಕ ಗ್ಯಾಂಗ್\’ನ ಸದಸ್ಯರು ಗೋಕುಲ್ ಗ್ರಾಮದ ಬಳಿಯಲ್ಲಿ ಮನೆ ದರೋಡೆಗೆ ಮುಂದಾಗಿತ್ತು. ಈ ಗ್ಯಾಂಗ್\’ನ ಓರ್ವ ಸದಸ್ಯನನ್ನು ಬಂಧಿಸಲಾಗಿದೆ. ಈತ ಮಹಾರಾಷ್ಟ್ರ, ಔರಂಗಬಾದ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 26 ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ನಗರ ಹೊರವಲಯದ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಗಾಯಿ ಪರೀದಿ ಗ್ಯಾಂಗ್, ಮನೆಗಳಿಗೆ ಮೊದಲು ಕಲ್ಲು ಒಡೆದು, ಬಳಿಕ ಮನೆಯೊಳಗೆ ನುಗ್ಗಿ ಮನೆಯ ಸದಸ್ಯರನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು. 2023 ರಲ್ಲಿ ಗೋಕುಲರಸ್ತೆಯ ರಜನಿಕಾಂತ್ ದೊಡ್ಡಮನಿ ಎಂಬಾತರ ಮನೆಯಲ್ಲಿ ಈ ಗ್ಯಾಂಗ್ ಇಂತಹ ಕೃತ್ಯ ಎಸಗಿ ಸುಮಾರು 2 ಕೆಜಿಗೂ ಆಧಿಕ ಚಿನ್ನಾಭರಣ ಕದ್ದು ಪರಾರಿಯಾಗಿತ್ತು.
ಆ ಪ್ರಕರಣದಲ್ಲಿ ಮುಖ್ಯ ಆರೋಪಿ ಸುನಿಲ್ ಚೌಹಾನ್ ಎಂಬಾತನನ್ನು ಬಂಧಿಸಲಾಗಿದೆ. ಇದೀಗ ಇದೇ ಗ್ಯಾಂಗ್ ನ ಮತ್ತೊಬ್ಬ ಸದಸ್ಯನನ್ನು ಬಂಧಿಸಲಾಗಿದೆ. ಪ್ರಾಥಮಿಕವಾಗಿ 15-20 ಜನರ ಹೆಸರನ್ನು ಬಂಧಿತ ಹೇಳಿದ್ದಾನೆ. ಮುಂದಿನ ದಿನಗಳಲ್ಲಿ ಆರೋಪಿಯನ್ನು ಕನ್ಟಡಿಗೆ ತೆಗೆದುಕೊಂಡು ಮತ್ತಷ್ಟು ಜನರನ್ನು ಬಂಧಿಸಲಾಗುವುದು ಎಂದು ಎನ್.ಶಶಿಕುಮಾರ್ ತಿಳಿಸಿದ್ದಾರೆ.