ಹುಬ್ಬಳ್ಳಿ: ಮನೆಯ ಮಾಲೀಕನ ಮಗನೇ ಬಾಡಿಗೆದಾರರ ಮನೆ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಮಂಟೂರ ರಸ್ತೆಯ ಮೌಲಾಲಿ ಬ್ಲಾಕ್ ರಾಯ್ಕರ್ ಕಿರೋಸಿನ ಪಂಪ ಹತ್ತಿರದ ನಿವಾಸಿ ಜುನೇದ್ ಅಕ್ಬರ್ ಅಲಿ ಮಲಬಾರ್ (19) ಎಂಬಾತನೇ ಕಳ್ಳತನ ಮಾಡಿದ್ದು, ಈತ ತಮ್ಮ ಮನೆಯಲ್ಲಿ ಬಾಡಗಿದಾರ ಅಸ್ಲಂ ಮಹಮ್ಮದ್ ಜಕ್ರಿಯಾ ಮನಿಯಾರ್ ಎಂಬಾತರ ಮನೆಯನ್ನು ಕಳ್ಳತನ ಮಾಡಿದ್ದಾನೆ.
ಅ.10 ರಂದು ಅಸ್ಲಂ ತಮ್ಮ ಕುಟುಂಬದ ಸಮೇತವಾಗಿ ಶಿವಮೊಗ್ಗದ ಅರಿಸಿಕೇರಿ ದರ್ಗಾಕ್ಕೆ ಹೋದಾಗ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ 20 ಗ್ರಾಂ ತೂಕದ ಬಂಗಾರ, 275 ಗ್ರಾಂ ತೂಕದ ಬೆಳ್ಳಿ ಮತ್ತು 10 ಸಾವಿರ ನಗದನ್ನು ದೋಚಿ ಯಾರಿಗೆ ಗೊತ್ತಾಗದ ಹಾಗೇ ಇದ್ದ.
ಮರುದಿನ ಊರಿಂದ ಬಂದ ಅಸ್ಲಂ ಮನೆಯ ಕೀಲಿ ಮುರಿದಿದ್ದನ್ನು ಗಮನಿಸಿ ಮನೆಯನ್ನು ಪರಿಶೀಲಿಸಿದಾಗ ನಗ, ನಾಣ್ಯ ಕಳ್ಳತನವಾಗಿರುವುದು ಗೊತ್ತಾಗಿದೆ. ಅದೇ ದಿನ ಶಹರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿದ್ದಾರೆ.
ತದನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಹರ ಪೊಲೀಸ್ ಠಾಣೆಯ ಪೊಲೀಸರು ಡಿಸಿಪಿ ಕ್ರೈಂ ರವೀಶ್ ಸಿ.ಆರ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಮ್.ಎಮ್.ತಹಶಿಲ್ದಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಬಂಧಿತನಿಂದ ಒಟ್ಟು 1.41.100 ರೂ ಮೌಲ್ಯದ ನಗ, ನಾಣ್ಯ, ಬೆಳ್ಳಿಯ ಸಾಮಾನು ವಶಕ್ಕೆ ಪಡೆದುಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ವಿನೋದ್ ದೊಡ್ಡಲಿಂಗಪ್ಪನವರ, ಮಾರುತಿ ಆರ್, ಎಎಸ್ಐ ದಾಸಣ್ಣವೆ, ಸಿಬ್ಬಂದಿ ರುದ್ರಪ್ಪ ಹೊರಟ್ಟಿ, ರವಿ.ಕೆಂದೂರ, ವಾಯ್.ಎಮ್.ಶೇಂಡ್ಸೆ, ಕನಕಪ್ಪ ರಗಣಿ, ರಾಮರಾವ್ ರಾಠೋಡ, ಭೋವಿ, ಹೊಸಮನಿ, ಸುಧಾಕರ, ಈಶ್ವರ ಕುರುವಿನಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
ಇನ್ನು ಶಹರ ಪೊಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.