ಹುಬ್ಬಳ್ಳಿ: ಅವಳಿ ನಗರ ಬೆಳೆದಂತೆ ಅಪರಾಧ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಅದರಂತೆ ಎಲ್ಲೆಂದರಲ್ಲಿ ಕ್ಷುಲ್ಲಕ ವಿಚಾರಕ್ಕಾಗಿ ಮಹಿಳೆಯರಿಗೆ ಕಾಡುವ ಪಾಗಲ್ ಪ್ರೇಮಿಗಳ ಹಾಗೂ ಕಿಡಿಗೇಡಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಪೋಲಿಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರ ಆದೇಶದ ಮೇರೆಗೆ ಕಿಡಿಗೇಡಿಗಳ ಆಟಕ್ಕೆ ಬ್ರೇಕ್ ಹಾಕಲು ಹು-ಧಾ ನಗರ ಪೊಲೀಸ್ ವ್ಯಾಪ್ತಿಯಲ್ಲಿ \’ಚನ್ನಮ್ಮ ಪಡೆ\’ ಪಣ ತೊಟ್ಟಿದೆ.
ಮಹಿಳೆಯರ ಮೇಲೆ ಕಿಡಿಗೇಡಿಗಳಿಂದ ಆಗುತ್ತಿರುವ ದೌರ್ಜನ್ಯ, ಅತ್ಯಾಚಾರ, ಕಿರಿಕಿರಿ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳೆಯರ ಭದ್ರತೆ ಹಾಗೂ ಸುರಕ್ಷತೆಗಾಗಿ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಚನ್ನಮ್ಮ ಪಡೆಯು ಈಗಾಗಲೇ ಕಾರ್ಯಪ್ರವೃತ್ತಿಯಾಗಿದೆ.
ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಜಾಗೃತಿ ಮೂಡಿಸುತ್ತಿದೆ. ಇನ್ನೂ ಶಾಲಾ-ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಪೆಟ್ರೊಲಿಂಗ್ ಮಾಡುತ್ತ ನಿಗಾ ವಹಿಸುವುದಲ್ಲದೆ ಯುವತಿಯರಿಗೆ ಚುಡಾಯಿಸುವ, ಕಿಡಿಗೇಡಿಗಳು, ಪುಂಡಪೋಕರಿಗಳಿಗೆ ಹಾಗೂ ರೋಡ್ ರೋಮಿಯೋಗಳಿಗೆ \’ಚೆನ್ನಮ್ಮ ಪಡೆ\’ ಅಕ್ಷರಶಃ ಸದೆಬಡೆಯಲಿದ್ದು, \’ಕಿಡಿಗೇಡಿಗಳೇ ಹುಷಾರ್!\’ ಎಂಬ ಸಂದೇಶವನ್ನು ನೀಡಿದೆ.