ಚಿಕ್ಕಬಳ್ಳಾಪುರ : ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುತ್ತವೆ ಆದ್ದರಿಂದ ಪ್ರತಿಯೊಬ್ಬರೂ ತಂಬಾಕು ಮುಕ್ತ ಜೀವನವನ್ನು ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದರು.
ನಗರದ ಬಿ.ಬಿ ರಸ್ತೆಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ “ಗುಲಾಬಿ ಆಂದೋಲನ ಜಾಥಾ ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿಗೆ ಯುವ ಜನತೆ ತಂಬಾಕಿನ ಉತ್ಪನ್ನಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದೊಂದು ಮಾರಕ ದುಶ್ಚಟವಾಗಿ ಪರಿಣಮಿಸಿದೆ. ತಂಬಾಕು ಸೇವನೆಯಿಂದ ಉಂಟಾಗುವ ಮಾರಕ ಪರಿಣಾಮ ಗಳ ಕುರಿತು ಅರಿಯುವುದರಿಂದ ದೂರ ಉಳಿಯಬಹುದು. ತಂಬಾಕು ಸೇವನೆ ಕೈಬಿಟ್ಟು ಆರೋಗ್ಯ ವಂತ ಸಮಾಜ ನಿರ್ಮಾಣಕ್ಕೆ ಎಲ್ಲರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಯುವಕರು, ವಿದ್ಯಾವಂತರು ಸಮಾಜದ ಬೆನ್ನೆಲುಬು. ಯುವ ಜನರು ಮುಖ್ಯವಾಗಿ ಕಾಲೇಜು ಹಂತದ ಕೆಲವು ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಖೈನಿ, ಹನ್ಸ್, ಕಡ್ಡಿ ಪುಡಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ಆರೋಗ್ಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗು ತ್ತಿದ್ದಾರೆ. ವಿದ್ಯಾರ್ಥಿ ಯುವ ಸಮೂಹ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳನ್ನು ಅರಿತು ಕೊಂಡು ಅದರಿಂದ ದೂರವಿರುವ ಜೊತೆಗೆ ತಮ್ಮ ಮನೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತಮಗೆ ಸಂಪರ್ಕಿತರಾಗುವ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಅವರು ಮಾತನಾಡಿ ತಂಬಾಕು ಸೇವನೆಯಿಂದ ಸಾಕಷ್ಟು ದುಷ್ಪರಿಣಾಮಗಳು ಆಗುತ್ತಿವೆ. ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಕ- ಯುವತಿಯರು ಬಲಿಯಾಗುತ್ತಿದ್ದಾರೆ. ಗಾಂಜಾ ವ್ಯಸನಿಗಳು ಹೆಚ್ಚಾಗು ತ್ತಿದ್ದಾರೆ. ತಂಬಾಕು ಉತ್ಪನ್ನಗಳು ಹಾಗೂ ಮಾದಕ ವಸ್ತುಗಳ ಸೇವನೆಯ ಅಡ್ಡಪರಿಣಾಮಗಳನ್ನು ಅರಿತು ಅಂತಹ ವ್ಯಸನಗಳಿಂದ ದೂರವಿರುವಂತೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಜಾಥಾ ಕಾರ್ಯಕ್ರಮವು ಬಿ.ಬಿ ರಸ್ತೆಯ ಸರ್ಕಾರಿ ಪ್ರೌಢಶಾಲೆಯ ಆವರಣದಿಂದ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿನ ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿ ಮಾಲೀಕರು, ಕಾರ್ಮಿಕರು, ಗ್ರಾಹಕರಿಗೆ ಗುಲಾಬಿ ಹೂವು ಕೊಟ್ಟು ತಂಬಾಕು ಮಾರಾಟ ಹಾಗೂ ಸೇವನೆ ಮಾಡ ಬೇಡಿ ಎಂದು ಮನವಿ ಮಾಡಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹರೀಶ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಕೃಷ್ಣ ಪ್ರಸಾದ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಮಂಜುಳಾ, ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲೆ ಪ್ರಭಾವತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
೨೧ಸಿಬಿಪಿಎಂ೩ :ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುತ್ತವೆ ಆದ್ದರಿಂದ ಪ್ರತಿಯೊಬ್ಬರೂ ತಂಬಾಕು ಮುಕ್ತ ಜೀವನವನ್ನು ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದರು.
ಇದನ್ನೂ ಓದಿ: Chikkaballapur News: ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಆರ್ ಟಿ ಓ ಅಧಿಕಾರಿ ವಿವೇಕಾನಂದ