ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 67ನೇ ಅಧ್ಯಕ್ಷರಾಗಿ ಅಧಿಕೃತವಾಗಿ ಗದ್ದುಗೆಯನ್ನು ಅಲಂಕ ರಿಸಿದ್ದಾರೆ. ಎರಡನೇ ಬಾರಿಗೆ ಈ ಪದವಿಯನ್ನು ಅಲಂಕರಿಸಿರುವ ಈ ‘ರಿಪಬ್ಲಿಕನ್’ ನಾಯಕನ ಕುರಿತಾಗಿ ಅಮೆರಿಕ ಸೇರಿದಂತೆ ಜಗತ್ತಿನ ಹಲವು ದೇಶಗಳು ಭಾರಿ ನಿರೀಕ್ಷೆ ಇಟ್ಟು ಕೊಂಡಿವೆ ಎನ್ನ ಬೇಕು.
ಏಕೆಂದರೆ, ಮೊದಲ ಬಾರಿಯ ಅಧಿಕಾರಾವಧಿಯಲ್ಲಿ ‘ಆಡಳಿತಕ್ಕೆ ಸಂಬಂಧಿಸಿ ನನಗೆ ಏನೂ ಗೊತ್ತಿಲ್ಲ’ ಎನ್ನುತ್ತಿದ್ದ ಟ್ರಂಪ್ ಅವರು ಈಗ ವ್ಯಕ್ತಿಗತವಾಗಿಯೂ, ವೃತ್ತಿಪರವಾಗಿಯೂ ಸಾಕಷ್ಟು ಮಾಗಿದ್ದಾರೆ. ಆರಂಭಿಕ ದಿನಗಳಲ್ಲಿ ತಮ್ಮ ವಿಲಕ್ಷಣ ವರ್ತನೆ ಮತ್ತು ಹಾವಭಾವಗಳಿಂದಾಗಿ ‘ಡೊನಾಲ್ಡ್ ಡಕ್’ ಎಂದೇ ಕೆಲ ಟೀಕಾಕಾರರಿಂದ ಗೇಲಿಗೊಳಗಾಗಿದ್ದ ‘ಡೊನಾಲ್ಡ್ ಟ್ರಂಪ್’ ಈಗ ಹತ್ತು ಹಲವು ಹೊಣೆಗಳ ನೊಗವನ್ನು ಹೆಗಲಿಗೇರಿಸಿಕೊಳ್ಳಬೇಕಾಗಿ ಬಂದಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಎಡೆಬಿಡದೆ ನಡೆಯುತ್ತಲೇ ಇರುವ ಸಂಘರ್ಷ, ಮಧ್ಯಪ್ರಾಚ್ಯ ವಲಯದಲ್ಲಿ ತಲೆದೋರಿರುವ ಬಿಗುವಿನ ವಾತಾವರಣ ಸೇರಿದಂತೆ ಜಾಗತಿಕ ಭೂರಾಜಕೀಯದ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವನ್ನು ಕೈಗೊಳ್ಳಬೇಕಿರುವುದು ಅವರ ಎದುರು ಇರುವ ಸವಾಲುಗಳಲ್ಲಿ ಸೇರಿವೆ. ಅಕ್ರಮ ವಲಸಿಗರನ್ನು ಮುಲಾಜಿಲ್ಲದೆ ಗಡಿಪಾರು ಮಾಡು ವುದಾಗಿ ಶುರುವಿನಿಂದಲೇ ಹೇಳಿಕೊಂಡು ಬಂದವರು ಟ್ರಂಪ್; ಈ ಭರವಸೆಯ ನೆರವೇರಿಕೆಯ ಕಡೆಗೇ ಅಮೆರಿಕನ್ನರು, ಅದರಲ್ಲೂ ಯುವ ಉದ್ಯೋಗಾ ಕಾಂಕ್ಷಿಗಳು ಕಣ್ಣು ನೆಟ್ಟಿದ್ದಾರೆ ಎಂಬು ದನ್ನು ಬಿಡಿಸಿ ಹೇಳಬೇಕಿಲ್ಲ.
ಇನ್ನು, ಆಯಾ ಕಾಲಕ್ಕೆ ಅಮೆರಿಕದ ಅಧ್ಯಕ್ಷರಾದವರ ಜಾಯಮಾನ ಮತ್ತು ಆಯಾ ಸಂದರ್ಭದ ರಾಜಕೀಯ ಹಿತಾಸಕ್ತಿಗಳಿಗೆ ತಕ್ಕಂತೆ ಅಮೆರಿಕ ಮತ್ತು ಭಾರತ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿ ಸಾಕಷ್ಟು ಏರು-ಪೇರುಗಳು ಕಾಣಬರುತ್ತಿದ್ದುದುಂಟು. ಆದರೀಗ, ಬದಲಾದ ವೈಶ್ವಿಕ ಭೂರಾಜಕೀಯ ದೃಶ್ಯಾವಳಿಯಲ್ಲಿ ಭಾರತವು ಎದ್ದುಕಾಣುವ ಸ್ಥಾನವನ್ನು ಅಲಂಕರಿಸಿರುವು ದರಿಂದ ಮತ್ತು ಭಾರತದ ಯಾವುದೇ ನಡೆಯಲ್ಲಿ ಒಂದಿಡೀ ವಿಶ್ವದ ಹಿತಕಾಯುವ ಆಶಯ ವಿರುತ್ತದೆ ಎಂಬುದು ಅಮೆರಿಕಕ್ಕೂ ಖಾತ್ರಿಯಾಗಿರುವುದರಿಂದ, ಮುಂಬರುವ ದಿನಗಳು ದ್ವಿಪಕ್ಷೀಯ ಬಾಂಧವ್ಯವರ್ಧನೆಯ ನೆಲೆಯಲ್ಲಿ ಭರವಸೆದಾಯಕವಾಗಿರುತ್ತವೆ ಎಂದುಕೊಳ್ಳಬಹುದು. ಈ ನಿರೀಕ್ಷೆ ಸುಳ್ಳಾಗದಿರಲಿ.