ಮುಂಬೈ:
ದೇಶದ ಯುವಜನತೆ ವಾರಕ್ಕೆ 70 ಗಂಟೆ ದುಡಿದು ತಮ್ಮ ವೃತ್ತಿಜೀವನದಲ್ಲಿ ಮುಂದೆ ಬರಬೇಕು, ಈ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂಬರ್ಥದಲ್ಲಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ. ಇದೀಗ ತಾವು ಹಿಂದೆ ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಬ್ಬ ವ್ಯಕ್ತಿಗೆ ಇಷ್ಟು ಹೊತ್ತು ಕೆಲಸ ಮಾಡಬೇಕೆಂದು ಬದ್ಧತೆಯನ್ನು ಒತ್ತಾಯಪೂರ್ವಕವಾಗಿ ಹೇರಬಾರದು ಎಂದು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಕಿಲಾಚಂದ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ನಾರಾಯಣ ಮೂರ್ತಿ, “ನೀವು ಒಬ್ಬರಿಗೆ ಇದನ್ನು ಮಾಡಿ, ಇದನ್ನು ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ನಾರಾಯಣ ಮೂರ್ತಿಯವರು ಇನ್ಫೋಸಿಸ್ ನ ಆರಂಭಿಕ ದಿನಗಳಲ್ಲಿ ತಮ್ಮ ವೈಯಕ್ತಿಕ ಕೆಲಸದ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಾನು ಬೆಳಗ್ಗೆ 6:20 ಕ್ಕೆ ಕಚೇರಿಗೆ ಹೋಗಿ ರಾತ್ರಿ 8:30 ಕ್ಕೆ ಹೊರಡುತ್ತಿದ್ದೆ. ಸುಮಾರು 40 ವರ್ಷ ಹೀಗೆಯೇ ಮಾಡಿದ್ದೇನೆ. ಅದು ಸತ್ಯ. ಆದ್ದರಿಂದ ಯಾರೂ ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ, ಹಾಗೆಂದು ಕೆಲಸ ಮಾಡುವ ಸಮಯ ನಮ್ಮನಮ್ಮ ವೈಯಕ್ತಿಕ ಆಯ್ಕೆ, ಅದನ್ನು ಯಾರೂ ನಿರ್ದೇಶಿಸಬಾರದು ಎಂದರು.
ಕೆಲಸದ ಸಮಯವು ವೈಯಕ್ತಿಕ ನಿರ್ಧಾರಗಳಾಗಿವೆ, ಸಾರ್ವಜನಿಕ ಚರ್ಚೆಗೆ ಸಂಬಂಧಿಸಿದ ವಿಷಯಗಳಲ್ಲ. ಇವು ಚರ್ಚಿಸಬೇಕಾದ ವಿಷಯಗಳಲ್ಲ. ಇವು ಆತ್ಮಾವಲೋಕನ ಮಾಡಿಕೊಳ್ಳಬಹುದಾದ, ಗ್ರಹಿಸಬಹುದಾದ ಮತ್ತು ಕೆಲವು ತೀರ್ಮಾನಕ್ಕೆ ಬರಬಹುದಾದ ಮತ್ತು ಅವರು ಬಯಸಿದ್ದನ್ನು ಮಾಡಬಹುದಾದ ವಿಷಯಗಳಾಗಿವೆ ಎಂದು ಅವರು ಹೇಳಿದರು, ಕೆಲಸ-ವೈಯಕ್ತಿಕ ಜೀವನದ ಸಮತೋಲನಕ್ಕೆ ಹೆಚ್ಚು ಆತ್ಮಾವಲೋಕನ ಅಗತ್ಯ ಎಂದರು.