ಮುಂಬೈ: ಮಹಾರಾಷ್ಟ್ರದ ಜಲಗಾಂವ್ನ ಪರಂದಾ ರೈಲು ನಿಲ್ದಾಣದ ಬಳಿ ಬುಧವಾರ (ಜ. 22) ನಡೆದ ಭೀಕರ ರೈಲು ದುರಂತದಲ್ಲಿ 11ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ (Jalgaon Train Tragedy). ಲಖನೌ-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಪುಷ್ಪಕ್ ಎಕ್ಸ್ಪ್ರೆಸ್ನಿಂದ ಜಿಗಿದ ಪ್ರಯಾಣಿಕರಿಗೆ ಇನ್ನೊಂದು ಕಡೆಯಿಂದ ಬಂದ ಕರ್ನಾಟಕ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಬೆಂಕಿ ವದಂತಿ ಕಾರಣದಿಂದ ಪ್ರಯಾಣಿಕರು ಹಳಿಗೆ ಜಿಗಿದಿದ್ದೇ ಇಷ್ಟೊಂದು ಪ್ರಮಾಣದ ಜೀವ ಹಾನಿಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ʼʼಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯಿಂದಾಗಿ ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಿಂದ ಜಿಗಿದ ಪ್ರಯಾಣಿಕರಿಗೆ ಕರ್ನಾಟಕ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದೇ ದುರಂತಕ್ಕೆ ಕಾರಣʼʼ ಎಂದು ಕಮಿಷನರ್ ಆಯುಷ್ ಪ್ರಸಾದ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಲಗಾಂವ್ ಪರಂದಾ ನಿಲ್ದಾಣದಲ್ಲಿ 2 ರೈಲುಗಳು ಹಾದು ಹೋಗುವಾಗ ಈ ದುರಂತ ಸಂಭವಿಸಿದೆ. ಬೆಂಕಿಯ ವದಂತಿ ಕಾರಣಕ್ಕೆ ಯಾರೋ ಚೈನ್ ಎಳೆದು ಹಲವು ಮಂದಿ ಹೊರಗೆ ಜಿಗಿದಿರುವುದು ದುರಂತಕ್ಕೆ ಕಾರಣ. ಚಿಕಿತ್ಸೆಗಾಗಿ 3 ಆಸ್ಪತ್ರೆಗಳನ್ನು ಸಕ್ರಿಯಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.
Such a terr!ble & heartbreaking news ..
Around 11 ppl lost their lives after they stepped down from their train after someone pulled the chain due to a rumour of fire on board & were run over by another train from opp direction in Maharashtra’s Jalgaon.pic.twitter.com/GETjqTIXV5— Ankita (@Cric_gal) January 22, 2025
ಬೆಂಕಿ ಹರಡಿದೆ ಎಂಬ ಸುಳ್ಳು ಸುದ್ದಿಯನ್ನು ನಂಬಿ 30-40 ಜನ ರೈಲಿನಿಂದ ಕೆಳಗೆ ಜಿಗಿದಿದ್ದರು. ಕೆಲವರು ದೂರ ಓಡಿಹೋದರೆ ಇನ್ನು ಕೆಲವರು ಪಕ್ಕದ ಹಳಿ ಮೇಲೆ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಹರಿದು ಅವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
“ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದೇವೆ. ಗಾಯಗೊಂಡ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕರ್ನಾಟಕ ಎಕ್ಸ್ಪ್ರೆಸ್ ತನ್ನ ಪ್ರಯಾಣವನ್ನು ಪುನರಾರಂಭಿಸಿದೆ. ಶೀಘ್ರದಲ್ಲಿಯೇ ಪುಷ್ಪಕ್ ಎಕ್ಸ್ಪ್ರೆಸ್ ಕೂಡ ಹೊರಡಲಿದೆʼʼ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Pushpak Express Fire: ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಭಾರೀ ದುರಂತ- 20ಕ್ಕೂ ಅಧಿಕ ಪ್ರಯಾಣಿಕರು ಸಾವು
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ಅವರು, “ಜಲಗಾಂವ್ ಜಿಲ್ಲೆಯಲ್ಲಿ ನಡೆದ ರೈಲುದ ಅಪಘಾತ ಸುದ್ದಿ ಕೇಳಿ ಆಘಾತವಾಗಿದೆ. ಸಚಿವ ಗಿರೀಶ್ ಮಹಾಜನ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತಲುಪಿದ್ದಾರೆ ಮತ್ತು ಜಿಲ್ಲಾಧಿಕಾರಿ ಶೀಘ್ರದಲ್ಲೇ ಅಲ್ಲಿಗೆ ತೆರಳಲಿದ್ದಾರೆ. ಇಡೀ ಜಿಲ್ಲಾಡಳಿತವು ರೈಲ್ವೆ ಆಡಳಿತದೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ. ಸುಮಾರು 8 ಆಂಬ್ಯಲೆನ್ಸ್ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆʼʼ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.