ಬೆಂಗಳೂರು: ನಟಿ ರಚಿತಾ ರಾಮ್ ವಿರುದ್ಧ ಸಂಜು ವೆಡ್ಸ್ ಗೀತಾ 2 ಚಿತ್ರದ ಪ್ರಚಾರಕ್ಕೆ ಅಸಹಕಾರ ಹಾಗೂ ಚಿತ್ರವೊಂದರ ನಿರ್ಮಾಪಕಿಗೆ ಅಡ್ವಾನ್ಸ್ ಹಣ ನೀಡದ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿ ಫಿಲ್ಮ್ ಚೇಂಬರ್ಗೆ ದೂರು ಸಹ ನೀಡಲಾಗಿತ್ತು. ಈ ಆರೋಪಗಳ ಬಗ್ಗೆ ಕೊನೆಗೂ ನಟಿ ರಚಿತಾ ರಾಮ್ (Actress Rachita Ram) ಮೌನ ಮುರಿದಿದ್ದು, ನನ್ನ ಮೇಲಿನ ಎಲ್ಲಾ ಆರೋಪಗಳು ಸುಳ್ಳು, ಇದೆಲ್ಲಾ ನನ್ನ ಮೇಲೆ ಬೇಕಂತಲೇ ಮಾಡಿರುವ ಆರೋಪ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ನಟಿ ರಚಿತಾ ರಾಮ್ ಅವರು, ನಾನು ಸಂಜು ವೆಡ್ಸ್ ಗೀತಾ 2 ಚಿತ್ರಕ್ಕೆ ಎಲ್ಲಾ ರೀತಿಯ ಸಪೋರ್ಟ್ ಮಾಡಿದ್ದೇನೆ. ಮೊದಲ ಬಾರಿ ರಿಲೀಸ್ ಆದಾಗ ಎಲ್ಲಾ ಕಾರ್ಯಕ್ರಮಗಳಿಗೂ ಅಟೆಂಡ್ ಆಗಿದ್ದೇನೆ. ಆಗ ಎಲ್ಲಾ ಮಾಧ್ಯಮಗಳ ಎದುರು ನನ್ನ ಹೊಗಳಿದ್ದಾರೆ. ರಚಿತಾ ರಾಮ್ ಅಂದ್ರೆ ಸಪೋರ್ಟಿವ್ ಅಂತೆಲ್ಲಾ ಮಾತನಾಡಿದ್ದಾರೆ. ಈಗ ಯಾಕೆ ನನ್ನ ಅನುಪಸ್ಥಿತಿಯಲ್ಲಿ ಆ ರೀತಿ ಮಾತನಾಡುತ್ತಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಇದೇ ಸಂಜು ವೆಡ್ಸ್ ಗೀತಾ 2 ಟೀಮ್ ಅವರು ಶೂಟಿಂಗ್ ಕಾರಣವೊಡ್ಡಿ, ಬೇರೊಂದು ಸಿನಿಮಾ ಪ್ರಮೋಷನ್ಗೆ ಹೋಗಲು ಅವಕಾಶ ಮಾಡಿಕೊಡಲಿಲ್ಲ. ಅವರು ದುಡ್ಡು ಹಾಕಿರಲಿಲ್ವಾ? ಅವಾಗ ಇನ್ನೊಬ್ಬರು ನಿರ್ಮಾಪಕರಿಗೆ ಕಷ್ಟ ಆಗ್ಲಿಲ್ವಾ? ಸರಿಯಾದ ಪ್ಲ್ಯಾನಿಂಗ್ ಇರಲಿಲ್ಲ, ಒಂದೊಂದು ದಿನ ಒಂದೊಂದು ಶೆಡ್ಯೂಲ್ ಹೇಳುತ್ತಿದ್ದರು. ಇವತ್ತು ಕಾರ್ಯಕ್ರಮ ಎಂದು ಹೇಳಿ ಕೊನೆ ಕ್ಷಣದಲ್ಲಿ ಮುಂದೂಡುತ್ತಿದ್ದರು. ಹೀಗಾಗಿ ನಾನು ಎರಡನೇ ಬಾರಿ ರಿಲೀಸ್ ಪ್ರಚಾರದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಇದೆಲ್ಲಾ ನನ್ನ ಮೇಲೆ ಬೇಕಂತಲೇ ಮಾಡಿರುವ ಆರೋಪ ಎಂದು ಹೇಳಿದ್ದಾರೆ.
ಇನ್ನೊಂದು ಸಿನಿಮಾದ ಅಡ್ವಾನ್ಸ್ ಪಡೆದು ವಾಪಸ್ ಮಾಡಿಲ್ಲ ಅನ್ನೋ ವಿಚಾರ ಸಾರಾ ಗೋವಿಂದು ನೇತೃತ್ವದಲ್ಲಿ ಮಾತುಕತೆಯಲ್ಲಿದೆ. ನಾನು ಆ ಬಗ್ಗೆ ಏನನ್ನೂ ಮಾತನಾಡುವಂತಿಲ್ಲ ಎಂದು ಆರೋಪಗಳಿಗೆ ರಚಿತಾ ರಾಮ್ ಕ್ಲಾರಿಟಿ ಕೊಟ್ಟಿದ್ದಾರೆ.