ಗಾಜಿಯಾಬಾದ್: ಆರ್ಸಿಬಿ ಬೌಲರ್ ಯಶ್ ದಯಾಳ್(Yash Dayal) ಮದುವೆಯ ಭರವಸೆ ನೀಡಿ ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಶೋಷಣೆ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು ದಯಾಳ್ ವಿರುದ್ಧ ವಿರುದ್ಧ ಎಫ್ಐಆರ್(FIR against Yash Dayal) ದಾಖಲಿಸಲಾಗಿದೆ.
ಸಂತ್ರಸ್ತ ಮಹಿಳೆ, ದಯಾಳ್ ಮೇಲೆ ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಹೊರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು ಅಲ್ಲದೆ ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ರಾಜ್ಯ ಪೊಲೀಸರಲ್ಲಿ ಮನವಿ ಮಾಡಿ ದಯಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಗಾಜಿಯಾಬಾದ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಿಂದ ಕ್ರಿಕೆಟಿಗನಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಸಂತ್ರಸ್ತ ಮಹಿಳೆ ಸಿಎಂ ಹೆಲ್ಪ್ಲೈನ್ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದರು. ಅದರ ಸ್ಕ್ರೀನ್ಶಾಟ್ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ನಲ್ಲಿ ದಯಾಳ್ ಅವರೊಂದಿಗಿನ ತಮ್ಮ ಫೋಟೋವನ್ನು ಸಹ ಮಹಿಳೆ ಹಂಚಿಕೊಂಡಿದ್ದರು.
ಇದನ್ನೂ ಓದಿ IPL 2025: ಆರ್ಸಿಬಿಗೆ ಕಪ್ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್ಗಳನ್ನು ಆರಿಸಿದ ವಿಜಯ್ ಮಲ್ಯ!
“ಕಳೆದ 5 ವರ್ಷಗಳಿಂದ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿರುವುದಾಗಿ ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಯಶ್ ದಯಾಳ್ ಮದುವೆಯ ಆಮಿಷವೊಡ್ಡಿ ತನ್ನನ್ನು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಿಸಿದ್ದಾರೆ. ದಯಾಳ್ ಕುಟುಂಬಕ್ಕೆ ತನ್ನನ್ನು ಪರಿಚಯಿಸಿದಾಗ ಈಕೆ ನಿಮ್ಮ ಭಾವಿ ಸೊಸೆ ಎಂದು ಹೇಳುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಂಡಿದ್ದ. ಆದರೆ ಒಂದು ತಿಂಗಳ ಹಿಂದೆ ಎಲ್ಲಾ ಸೋಶಿಯಲ್ ಮೀಡಿಯಾ ಖಾತೆಗಳಿಂದ ಅನ್ಫಾಲೋ ಮಾಡಿದ್ದರು. ನಾನು ಯಶ್ ನಡೆಯನ್ನು ಖಂಡಿಸಿದೆ. ಮದುವೆ ಆಗುವಂತೆ ಕೇಳಿಕೊಂಡೆ. ಆಗ ಇದಕ್ಕೆ ನಿರಾಕರಿಸಿ ನನ್ನ ಮೇಲೆ ಹಲ್ಲೆಯನ್ನು ಮಾಡಿದ್ದಾನೆ” ಎಂದು ಸಂತ್ರಸ್ತ ದೂರಿದ್ದಾರೆ.