ಮೈಸೂರು
ಡಿಸಿಎಂ ಡಿ ಕೆ ಶಿವಕುಮಾರ್ ತಮ್ಮ ಕುಟುಂಬಸ್ಥರ ಜೊತೆ ಇಂದು ಆಷಾಢ ಮಾಸದ ಎರಡನೇ ಶುಕ್ರವಾರ ಮೈಸೂರು ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ ಈಡುಗಾಯಿ ಒಡೆದರು.ಡಿ ಕೆ ಶಿವಕುಮಾರ್ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಬೆಟ್ಟದ ಮೇಲೆ ಬಂದಾಗ ದೇವಸ್ಥಾನದ ಆಡಳಿತ ಮಂಡಳಿ ಅವರಿಗೆ ಪುಷ್ಪಮಾಲೆ ಮತ್ತು ಶಾಲು ಹೊದಿಸಿ ಸನ್ಮಾನ ಮಾಡುವ ಮೂಲಕ ಸ್ವಾಗತಿಸಿತು. ಅವರು ನಿನ್ನೆ ನಂದಿ ಹಿಲ್ಸ್ ಕೆಳಭಾಗದಲ್ಲಿ ಭೋಗನಂದೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದ ಶಿವಕುಮಾರ್ ಚಾಮುಂಡಿ ಬೆಟ್ಟದಲ್ಲಿ ಇಂದು ಈಡುಗಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ದುಃಖ, ಕಷ್ಟಗಳನ್ನು ಸಹಿಸುವ ಶಕ್ತಿಯನ್ನು ನೀಡಲಿ, ಈ ಬಾರಿ ಕೂಡ ಇಡೀ ರಾಜ್ಯಕ್ಕೆ ಸಮೃದ್ಧಿ, ಮಳೆ ನೀಡಿ ತಾಯಿ ಚಾಮುಂಡಿ ಶಕ್ತಿ ನೀಡಲಿ, ನಾವು ಏನೇ ಕೆಲಸ ಮಾಡಬೇಕಾದರೂ ತಾಯಿಯಲ್ಲಿ ಪ್ರಾರ್ಥನೆ ಮಾಡಿಕೊಂಡು ಮುಂದುವರಿಸಿದ್ದೇವೆ. ಇವತ್ತು ಕೂಡ ನಾನು ನನ್ನ ಕುಟುಂಬ ಸಮೇತ ಬಂದು ತಾಯಿ ದರ್ಶನ ಮಾಡಿ ರಾಜ್ಯದ ಜನತೆಗೆ, ನನಗೆ, ನನ್ನ ಕುಟುಂಬಕ್ಕೆ ಶುಭವಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು.
ಪ್ರಯತ್ನ ವಿಫಲ ಆದ್ರೂ ಪ್ರಾರ್ಥನೆ ವಿಫಲ ಆಗಲ್ಲ ಅನ್ನೋದು ನನ್ನ ನಂಬಿಕೆ, ನನಗೆ ಏನೇನು ಬೇಕೋ ಅದನ್ನು ಪ್ರಾರ್ಥನೆ ಮಾಡಿದ್ದೇನೆ, ಇಲ್ಲಿ ರಾಜಕೀಯ ಬಗ್ಗೆ ಮಾತನಾಡಲು ನಾನು ಬಂದಿಲ್ಲ, ಯಾವ ಚರ್ಚೆಯೂ ಬೇಡ, ರಾಜ್ಯಕ್ಕೆ ಒಳ್ಳೆದಾಗಲಿ, ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಪಕ್ಷದ ಅಧ್ಯಕ್ಷರು ಅವರು ನಮ್ಮೆಲ್ಲರಿಗೂ ಬುದ್ದಿವಾದ ಹೇಳಿದ್ದಾರೆ, ಸಂದೇಶ ಕೊಟ್ಟಿದ್ದಾರೆ. ಅವರ ಮಾತಿನಂತೆ ನಡೆದುಕೊಂಡು ಎಲ್ಲರೂ ಒಟ್ಟುಸೇರಿ ಕೆಲಸ ಮಾಡೋಣ ಎಂದರು.